ಶಹಾಬಾದ: ಪ್ರತಿನಿತ್ಯ ನೂರಾರು ವಾಹನಗಳ ಸಂಚಾರಕ್ಕೆ ಸಾಕ್ಷಿಯಾಗುವ ನೆಹರು ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ಫುಟ್‌ಪಾತ್ ಜಾಗ ಅತಿಕ್ರಮಣ, ವಾಹನಗಳ ಸಂಖ್ಯೆ ಹೆಚ್ಚಳ ಹಾಗೂ ನಗರ ಬೆಳವಣಿಗೆಯಿಂದ ಸಂಚಾರ ದಟ್ಟಣೆ ನಿಯಂತ್ರಣ ನಗರಸಭೆಯೂ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ.
ನಗರದ ನೆಹರು ವೃತ್ತದಲ್ಲಿ ಸಂಚಾರ ಕಿರಿಕಿರಿಗೆ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಪ್ರಾಣ ಸಂಕಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ನೆಹರು ವೃತ್ತದ ಸುತ್ತಲೂ ರಸ್ತೆಯ ಬದಿಯಲ್ಲಿ ಹಣ್ಣಿನ ಅಂಗಡಿ, ತಳ್ಳೋ ಬಂಡಿ ನಿಲ್ಲಿಸಲಾಗುತ್ತಿದೆ.ಇದರಿಂದ ಟ್ರಾಫಿಕ್ ಸಮಸ್ಯೆ ಉಲ್ಭಣಗೊಂಡಿದೆ.ಇದರಿಂದ ಸಾರ್ವಜನಿಕರಿಗೆ ವಾಹನ ಸವಾರರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಜಾಣ ವೌನ ವಹಿಸಿದ್ದಾರೆ.
ನಗರದ ಮುಖ್ಯ ವೃತ್ತ ಇದಾಗಿರುವುದರಿಂದ ನಗರದೊಳಗೆ ಪ್ರವೇಶಿಸುವ ಎಲ್ಲಾ ವಾಹಣಗಳು ಇಲ್ಲಿಂದಲೇ ಸಾಗಬೇಕು.ಅಲ್ಲದೇ ಇಕ್ಕಟ್ಟಾದ ರಸ್ತೆ, ಅದರ ಮಧ್ಯೆ ಕುಡಿಯುವ ನೀರಿನ ವಾಲ್ ಇದೆ. ಈ ರಸ್ತೆ ನಾಲ್ಕು ರಸ್ತೆಗಳ ಸಂಪರ್ಕ ಕೊಂಡಿಯಾಗಿದೆ. ದ್ವಿಚಕ್ರ ವಾಹನಗಳ ಜತೆಗೆ, ಬಸ್, ಲಾರಿ, ಟಂಟಂ ಹೀಗೆ ಎಲ್ಲ ಬಗೆಯ ವಾಹನಗಳು ಇದೆ ಮಾರ್ಗದಿಂದಲೇ ಸಂಚರಿಸಬೇಕು.
ಈ ವೃತ್ತದಿಂದಲೇ ನಗರಸಭೆ, ಪೊಲೀಸ್ ಕಚೇರಿ, ತಹಸೀಲ್ದಾರ ಕಾರ್ಯಾಲಯ, ನಗರಸಭೆ, ರೇಲ್ವೆ ನಿಲ್ದಾಣ, ಅಂಚೆ ಕಚೇರಿ, ಬಸ್ ನಿಲ್ದಾಣ ಸೇರಿದಂತೆ ಅನೇಕ ಕಚೇರಿಗಳಿಗೆ ಹೋಗಲು ಇದೇ ಮಾರ್ಗ ಸೂಕ್ತವಾಗಿರುವುದರಿಂದ ಸಂಚಾರ ಸಮಸ್ಯೆ ವಿಪರೀತವಾಗಿದೆ. ಹೀಗಾಗಿ ಆದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಸಂಚಾರ ಸಮಸ್ಯೆ ನಿಯಂತ್ರಿಸಲು ಯಾರು ಮುಂದಾಗುತ್ತಿಲ್ಲ.
ಜನತೆ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಆ ಕಡೆ ಮುಖಮಾಡುತ್ತಿಲ್ಲ. ಕೂಡಲೇ ರಸ್ತೆಯ ಬದಿಯ ಎಲ್ಲಾ ಅಂಗಡಿ ಡಬ್ಬಾಗಳನ್ನು ತೆರವುಗೊಳಿಸಿ ಸುಲಭ ಸಂಚಾರಕ್ಕೆ ಅನುಕೂಲಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.