ಸುರಪುರ: ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಯಾವ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿಯೂ ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ಕೆಲಸಗಳಾಗಿಲ್ಲ.ಕಾಮಗಾರಿಗಳ ಹೆಸರಲ್ಲಿ ಪಿಡಿಒ ಮತ್ತು ಮದ್ಯವರ್ತಿಗಳು ಹಣ ಲೂಟಿ ಮಾಡಿದ್ದಾರೆ.ಇದನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಅಲ್ಲದೆ ಗ್ರಾಮ ಪಂಚಾಯತಿಗಳ ಮೂಲಕ ಬಡವರಿಗೆ ಕೊಡಬೇಕಾದ ಆಶ್ರಯ ಯೋಜನೆ ಮನೆಗಳನ್ನು ಸರಿಯಾಗಿ ಹಂಚಿಕೆ ಮಾಡದ ಕಾರಣ ಮಂಜೂರಾದ ಮನೆಗಳು ವಾಪಸ್ಸಾಗಿವೆ.ಇನ್ನು ಮನೆಗಳಿರುವವರಿಗೆ ಮತ್ತೆ ಮನೆಗಳನ್ನು ಕೊಡುವ ಮೂಲಕ ಭ್ರಷ್ಟಾಚಾರ ನಡೆದಿದೆ.ಇವೆಲ್ಲದರ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು.ಇಲ್ಲವಾದಲ್ಲಿ ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ನಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿಯನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ,ದೇವಿಂದ್ರಪ್ಪ ತಿಪ್ಪನಟಿಗಿ,ಅಂಬಣ್ಣ ದೋರೆ ಸೇರಿದಂತೆ ಅನೇಕರಿದ್ದರು.