ಅಧಿಕಾರಿಗಳು ಆನ್‌ಲೈನ್‌ನಲ್ಲಿ ಪಿಎಆರ್ ಸಲ್ಲಿಸುವುದು ಕಡ್ಡಾಯ: ಆರ್.ವೆಂಕಟೇಶ ಕುಮಾರ್

0
80

ಕಲಬುರಗಿ: ಪ್ರತಿ ವರ್ಷ ರಾಜ್ಯ ಸರ್ಕಾರಿ ನೌಕರರು/ಅಧಿಕಾರಿಗಳು ಸಲ್ಲಿಸಲಿರುವ ಕಾರ್ಯನಿರ್ವಹಣಾ ವರದಿ (ಗೌಪ್ಯ ವರದಿ)ಯನ್ನು ಇನ್ಮುಂದೆ ಆನ್‌ಲೈನ್‌ನಲ್ಲಿ ವಿದ್ಯುನ್ಮಾನ ಕಾರ್ಯ ನಿರ್ವಹಣಾ ವರದಿ (ಇ-ಪಿಎಆರ್) ಕಡ್ಡಾಯವಾಗಿ ಸಲ್ಲಿಬೇಕಾಗಿದ್ದು, ಈ ನೂತನ ಕಾರ್ಯನಿರ್ವಹಣಾ ವರದಿಗೆ ಇನ್ನಷ್ಟು ಮಹತ್ವ ಬರಲಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಡಾ.ಎಸ್.ಎಮ್ ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಮೈಸೂರು ಆಡಳಿತ ತರಬೇತಿ ಸಂಸ್ಥೆ ಸಹಯೋಗದಲ್ಲಿ ಕಲಬುರಗಿ ಜಿಲ್ಲೆಯ ಎ ವೃಂದದ ಅಧಿಕಾರಿಗಳಿಗೆ ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ತಂತ್ರಾಂಶ ಮುಖಾಂತರ ದಾಖಲಿಸುವ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ಆಧಾರಿಸಿ ಬಡ್ತಿ, ಬೇರೆ ಬೇರೆ ಉದ್ಯೋಗಗಳು ದೊರೆಯಲಿವೆ. ಹಾಗಾಗಿ ಆನ್‌ಲೈನ್‌ನಲ್ಲಿ ವರದಿ ಭರ್ತಿ ಮಾಡುವಾಗ ಜಾಗರೂಕತೆಯಿಂದ ತುಂಬಬೇಕು. ಯಾವ ಅಧಿಕಾರಿಯೂ ಈ ಬಗ್ಗೆ ಹಗುರವಾಗಿ ಪರಿಗಣಿಸಬಾರದು ಎಂದ ಅವರು ಕಿವಿ ಮಾತು ಹೇಳಿದರು. ಈಗಾಗಲೇ ೫ ವರ್ಷದ ಹಿಂದೆಯೇ ಕೇಂದ್ರ ಸಿಬ್ಬಂದಿ ತರಬೇತಿ ಇಲಾಖೆಯು ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಮುಂತಾದ ಸೇವಾ ಅಧಿಕಾರಿಗಳ ಕಾರ್ಯ ನಿರ್ವಹಣಾ ವರದಿಯನ್ನು ಆನ್ ಲೈನ್(ವಿದ್ಯುನ್ಮಾನ)ನಲ್ಲಿ ತುಂಬುವುದನ್ನು ಜಾರಿಗೆ ತಂದಿದ್ದು, ಯಶ ಕಂಡಿದೆ ಎಂದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆನ್‌ಲೈನ್‌ನಲ್ಲಿ ಕಾರ್ಯ ನಿರ್ವಹಣಾ ವರದಿ ತುಂಬುವಾಗ ಮೊದಲು ಆಯಾ ಅಧಿಕಾರಿ/ನೌಕರರು ಒಂದು ವರ್ಷದ ಅವಧಿಯಲ್ಲಿ ಅವರ ಗುರಿ,ಸಾಧನೆ ಮುಂತಾದವುಗಳನ್ನು ಸ್ವಯಂ ಮೌಲ್ಯಮಾಪನ ಮಾಡಿ, ವರದಿ ಮಾಡುವ ಪ್ರಾಧಿಕಾರ (ರಿಪೋರ್ಟಿಂಗ್ ಅಥಾರಿಟಿ)ಕ್ಕೆ ಸಲ್ಲಿಸಬೇಕು. ನಂತರ ವರದಿ ಮಾಡುವ ಪ್ರಾಧಿಕಾರ (ಪುನರ್ ಅವಲೋಕನ ಮಾಡುವ ಪ್ರಾಧಿಕಾರ ( ರಿವ್ಹ್ಯೂ ಅಥಾರಿಟಿ)ಗೆ ಸಲ್ಲಿಸಬೇಕು. ಅಂತಿಮವಾಗಿ ಅಂಗೀಕರಿಸುವ ಪ್ರಾಧಿಕಾರದ ಸಹಿ ಹಾಕಲಿದೆ ಎಂದು ಅವರು ಹೇಳಿದರು.

ಮೊದಲು ನಿಗದಿತ ಅವಧಿಯಲ್ಲಿ ಕಾರ್ಯ ನಿರ್ವಹಣಾ ವರದಿ ಸಲ್ಲಿಸದಿದ್ದಲ್ಲಿ ವಿಶೇಷ ವರದಿ ಸ್ಪೇಷಲ್ ರಿಪೋರ್ಟಿಂಗ್ ಸಲ್ಲಿಸುವ ವ್ಯವಸ್ಥೆ ಇತ್ತು. ಆದ್ರೆ ಮುಂದಿನ ದಿನಗಳಲ್ಲಿ ವಿಳಂಬ ಮಾಡಲು ಬರುವುದಿಲ್ಲ. ಆನ್‌ಲೈನ್‌ನಲ್ಲಿ ಸ್ಪೆಷಲ್ ರಿಪೋರ್ಟಿಂಗ್ ವರದಿಗೆ ಅವಕಾಶವೇ ಇರುವುದಿಲ್ಲ ಎಂದು ಅವರು ತಿಳಿಸಿದರು. ಅಧಿಕಾರಿಗಳಾಗಲೀ ಅಥವಾ ಪ್ರಾಧಿಕಾರಗಳಾಗಲೀ ಆನ್‌ಲೈನ್ ನಲ್ಲಿ ನೀಡಿರುವ ಕೊನೆಯ ದಿನಾಂಕಕ್ಕಿಂತ ಮೊದಲೇ ವರದಿ ಸಲ್ಲಿಸಬೇಕು. ಯಾಕೆಂದರೆ, ಕೊನೆ ಕ್ಷಣದಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡು ಸಮಸ್ಯೆಯಾಗಲಿದೆ ಎಂದು ಅವರು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ್ ಅವರು ಮಾತನಾಡಿ ಪ್ರತಿಯೊಬ್ಬ ಅಧಿಕಾರಿಯು ತನ್ನ ಮೇಲಾಧಿಕಾರಿಗೆ ಕರ್ನಾಟಕ ನಾಗರಿಕ ಸೇವೆಗಳ ಕಾರ್ಯನಿರ್ವಹಣಾ ವರದಿ-೨೦೦೦ ಪ್ರಕಾರ ಸಲ್ಲಿಸುವುದು ಕಡ್ಡಾಯವಾಗಿದೆ. ಆದ್ರೆ ಕೆಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ವರದಿ ಸಲ್ಲಿಸುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.

ಎನ್‌ಐಸಿ ಕೇಂದ್ರದ ಅಧಿಕಾರಿ ಸುಧೀಂದ್ರ ಅವಧಾನಿ ಅವರು ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ ಇರುವ ಕಾರ್ಯನಿರ್ವಾಹಣಾ ವರದಿಯನ್ನು ಇನ್ಮುಂದೆ ಆನ್‌ಲೈನ ನಲ್ಲಿ ತುಂಬಬೇಕಾಗುತ್ತದೆ. ಇದಕ್ಕೆ ಮುಖ್ಯವಾಗಿ ಎನ್‌ಐಸಿ ಇ-ಮೇಲ್ ಅಕೌಂಟ್ ಇರಬೇಕು .ಯಾವ ಅಧಿಕಾರಿ ಕಾರ್ಯ ನಿರ್ವಹಣಾ ವರದಿ ತುಂಬಬೇಕೋ ಅವರು ಕಡ್ಡಾಯವಾಗಿ ಎನ್‌ಐಸಿ ಇ-ಮೇಲ್ ಅಕೌಂಟ್ ಹೊಂದಬೇಕು. ನಂತರ ಜಿ-ಮೇಲ್ ನಲ್ಲಿ ಲಾಗಿನ್ ಆಗಿ ವರದಿ ತುಂಬಬೇಕು ಎಂಬುದರ ಬಗ್ಗೆ ವಿವರಿಸಿದರು. ಒಂದು ಸಾರಿ ಸರ್ಕಾರಿ ಅಧಿಕಾರಿಗಳು, ಎನ್‌ಐಸಿ ಇ-ಮೇಲ್ ಅಕೌಂಟ್ ಪಡೆದರೆ ಮುಂದಿನ ದಿನಗಳಲ್ಲಿ ಬಹುಪಯೋಗಕ್ಕೆ ಬರಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸುಧೀಂದ್ರ ಅವಧಾನಿ ಅವರು ಪಿಪಿಟಿ ಪ್ರದರ್ಶನದ ಮೂಲಕ ಹೇಗೆ ಆನ್ ಲೈನ್ ಕಾರ್ಯನಿರ್ವಹಣಾ ವರದಿ ತುಂಬಬೇಕು ಅನ್ನುವುದರ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳ ’ಎ’ ವೃಂದದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಅಂಬೋಜಿ ನಾಯ್‌ಕೋಡಿ ಅವರು ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here