ಸುರಪುರ: ತಾಲೂಕಿನ ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕರ ಮೇಲಿನ ಸುಳ್ಳು ಕೇಸ್ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡರು ಕಳೆದ ನಾಲ್ಕು ದಿನಗಳ ಹಿಂದೆ ಕೆಲ ಸಂಘಟನೆಗಳ ಮುಖಂಡರು ಮಕ್ಕಳಿಗೆ ನೀಡುವ ಹಾಲಿನ ಪುಡಿಯ ಪಾಕೇಟ್ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ವಿವಿಧ ಶಾಲೆಗಳಿಗೆ ವಿತರಣೆ ಮಾಡಲು ಹಾಲಿನ ಪುಡಿಯನ್ನು ಹೊತ್ತು ತರುತ್ತಿದ್ದ ವಾಹನವನ್ನು ತಡೆದು ಕಾಳ ಸಂತೆಯಲ್ಲಿ ಮಾರಾಟಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಇದರಲ್ಲಿ ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕರು ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಇದು ಸತ್ಯಕ್ಕೆ ದೂರವಾಗಿದೆ.ಕಳೆದ ನಾಲ್ಕು ವರ್ಷಗಳಿಂದ ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕರು ಒಂದೂ ಲೋಪವಿಲ್ಲದೆ ಮತ್ತು ಕಪ್ಪು ಚುಕ್ಕೆಯಿಲ್ಲದಂತೆ ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ.ಅಲ್ಲದೆ ಇಡೀ ತಾಲೂಕಿನ ಯಾವ ಶಾಲೆಯಿಂದಲೂ ಅವರ ಬಗ್ಗೆ ಒಂದೂ ದೂರುಗಳಿಲ್ಲ,ಅಲ್ಲದೆ ಹಾಲಿನ ಪೌಡರ್ ಪಾಕೇಟ್ ಆಯಾ ಶಾಲೆಗಳಿಗೆ ತಲುಪಿಸುವ ಕೆಲಸ ಇದನ್ನು ಗುತ್ತಿಗೆ ಪಡೆದ ಏಜೆಂಟರದಾಗಿರಲಿದೆ.ಶಾಲೆಗೆ ತಲುಪಿದ ನಂತರ ಅದು ಅಕ್ಷರದಾಸೋಹ ಮತ್ತು ಶಾಲೆಯ ಜವಬ್ದಾರಿಯಾಗಿರಲಿದೆ.
ಆದರೆ ಶಾಲೆಗೆ ಒಯ್ಯುತ್ತಿರುವ ವಾಹನವನ್ನು ತಡೆದು ಕಾಳಸಂತೆಗೆ ಮಾರಾಟಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಆರೀಪಿಸಿರುವುದು ಮತ್ತು ಅದರಲ್ಲಿ ಅಕ್ಷರದಾಸೋಹ ಸಹಾಯಕ ನಿರ್ದೇಶಕರ ಹೆಸರನ್ನು ವಿನಾಕಾರಣ ಉಲ್ಲೇಖಿಸಿರುವ ಕ್ರಮ ಸರಿಯಾದುದಲ್ಲ,ಆದ್ದರಿಂದ ಅವರ ಮೇಲೆ ದಾಖಲಿಸಿರುವ ಸುಳ್ಳು ದೂರನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ವಿನಂತಿಸುತ್ತದೆ ಎಂದು ತಿಳಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಸಂಜೀವ ದರಬಾರಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ,ಪ್ರಾ.ಶಾ.ಶಿ.ಸಂ ಜಿಲ್ಲಾ ಖಜಾಂಚಿ ಸೋಮರಡ್ಡಿ ಮಂಗಿಹಾಳ ಹಾಗು ಪದಾಧಿಕಾರಿಗಳಾದ ಭೀಮಪ್ಪ ಹೆಚ್,ಮಹೇಶ ಜಹಾಗಿರದಾರ,ಮಲ್ಲಿಕಾರ್ಜುನ ಕಟ್ಟಿಮನಿ,ಶ್ಯಾಮುವೆಲ್,ಜಾಕೀರ್ ಹುಸೇನ್,ಚಂದ್ರಕಾಂತ,ಮಲ್ಲಣ್ಣ,ಪಾಲು ನಾಯಕ್,ಭಾಗಣ್ಣಗೌಡ,ಅಂಬ್ರೇಶಗೌಡ,ಸಾಹೇಬರಡ್ಡಿ,ಅಬ್ದುಲ್ ರಹೆಮಾನ್,ಮಲ್ಲಣ್ಣ ಸಜ್ಜನ್ ಸೇರಿದಂತೆ ಅನೇಕರಿದ್ದರು.