ದಾವಣಗೆರೆ : ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿ 3ಬಿ ಯಿಂದ 2ಎ ಗೆ ಸೇರ್ಪಡಗೊಳಿಸುವುದಕ್ಕೆ ಸಂಬಂಧ ದಾವಣಗೆರೆ ಜಿಲ್ಲೆಯಿಂದಲೇ ಅಧ್ಯಯನ ಪ್ರಾರಂಬಿಸಿದ್ದು, ಇದರ ಜೊತೆ ಜೊತೆಗೆ, ಆಯೋಗಕ್ಕೆ ಬೇಡಿಕೆ ಸಲ್ಲಿಸಿರುವ ಇತರೆ ಜಾತಿ, ಸಮುದಾಯಗಳ ಕುರಿತೂ ಸಮೀಕ್ಷೆ, ಅಧ್ಯಯನವನ್ನು ಆಯೋಗವು ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದರು.
ವಿವಿಧ ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಮಾಹಿತಿ ಸಂಗ್ರಹಣೆ ಮತ್ತು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿ 3ಬಿ ಯಿಂದ 2ಎ ಗೆ ಸೇರ್ಪಡಗೊಳಿಸುವುದಕ್ಕೆ ಸಂಬಂಧ ಈಗಾಗಲೆ ಸಮೀಕ್ಷೆ ಹಾಗೂ ಅಧ್ಯಯನ ಪ್ರಾರಂಭಿಸಿದ್ದೇವೆ. ಈಗಾಗಲೆ ಕೆಲ ಹಿಂದುಳಿದ ಜಾತಿ ಪಟ್ಟಿಯಲ್ಲಿರುವ ಸಮಾಜಗಳು ತಮ್ಮನ್ನು ಬೇರೆ ಬೇರೆ ವರ್ಗಗಳಿಗೆ ಸೇರಿಸುವಂತೆ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಲ್ಲದ ಕೆಲ ಜಾತಿಗಳು ತಮ್ಮನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿವೆ, ಹಾಗಾಗಿ ಬೇಡಿಕೆ ಇರುವ ಎಲ್ಲಾ ಜಾತಿಗಳವರ ಮನವಿಗಳನ್ನೂ ಪರಿಶೀಲಿಸಲಾಗುವುದು.
ಬೇರೆ ಬೇರೆ ಜಾತಿ, ವರ್ಗಗಳ ಅಧ್ಯಯನಕ್ಕಾಗಿ ಆಯೋಗವು ಪ್ರತ್ಯೇಕವಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಅಧ್ಯಯನ ನಡೆಸುವುದು ಸಮಂಜಸವಲ್ಲ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಧ್ಯಯನ ಮಾಡುವುದರ ಜೊತೆ, ಜೊತೆಗೆ, ವಿವಿಧ ಜಾತಿ, ಸಮುದಾಯದ ಜನರ ಸಂಸ್ಕøತಿ, ಜೀವನೋಪಾಯ, ಬದುಕಿನ ಇತರೆ ಆಯಾಮಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು.
ವರ್ಗ 1 ರಲ್ಲಿ 95, 2ಎ ನಲ್ಲಿ 102, 3ಎ-03 ಹಾಗೂ 3ಬಿ ರಲ್ಲಿ 06 ಜಾತಿಗಳು ಇವೆ. ಆದರೆ ಇವೆಲ್ಲವುಗಳಲ್ಲಿ ಉಪಜಾತಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ ಯಾವ ಜಾತಿ, ಯಾವ ವರ್ಗಕ್ಕೆ ಹೋದಾಗ, ಪರಿಸ್ಥಿತಿ ಏನಾಗಬಹುದು ಎಂಬೆಲ್ಲ ಅಂಶಗಳನ್ನೂ ನಾವು ಅಧ್ಯಯನ ನಡೆಸಬೇಕಾಗುತ್ತದೆ. ರಾಜ್ಯದ 9-10 ಜಿಲ್ಲೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಯೋಜಿಸಲಾಗಿದೆ.
ರಾಜ್ಯದ ಅನಾಥಾಶ್ರಮದಲ್ಲಿರುವ ಅನಾಥ ಮಕ್ಕಳಿಗೆ ಸಂಬಂಧಿಸಿದಂತೆ ಅವರು ಯಾವ ಜಾತಿ, ವರ್ಗಗಳಿಗೆ ಸೇರುತ್ತಾರೆಂಬುದನ್ನು ಪರಿಶೀಲಿಸಿಲು ನಿರ್ಧರಿಸಲಾಗಿದೆ. ಅನಾಥ ಮಕ್ಕಳ ಜಾತಿ ನಿರ್ಧಾರ ಕುರಿತಂತೆ ಈಗಾಗಲೆ ತೆಲಂಗಾಣ, ರಾಜಸ್ಥಾನ ರಾಜ್ಯದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಒಟ್ಟು ಇರುವ ಅನಾಥ ಮಕ್ಕಳು ಎಷ್ಟು, ಅವರ ಪ್ರಸ್ತುತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತಂತೆಯೂ ವರದಿ ಸಂಗ್ರಹಿಸಿ, ಅಧ್ಯಯನ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಾಲಕಿ ಹಾಗೂ ಬಾಲಕರಿಗಾಗಿ ಪ್ರತ್ಯೇಕ ಬಾಲಮಂದಿರಗಳಿವೆ.
ಅನಾಥವಾಗಿರುವ 18 ಬಾಲಕಿಯರು, 19 ಬಾಲಕರಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ಏಕ ಪೋಷಕರಿರುವ 49 ಮಕ್ಕಳು ಇದ್ದರೆ, 14 ಮಕ್ಕಳು ತಂದೆ, ಅಥವಾ ತಾಯಿ ಇದ್ದರೂ ಕಡುಬಡವರ ಮಕ್ಕಳಾಗಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ 03 ಮಕ್ಕಳಿದ್ದರೆ, 373 ಮಕ್ಕಳು ಏಕ ಪೋಷಕರನ್ನು ಹೊಂದುವಂತಾಗಿದೆ. ಸಂಪೂರ್ಣ ಅನಾಥರಾಗಿರುವ, ತಂದೆ ತಾಯಿ ಯಾರೆಂದು ತಿಳಿಯದಿರುವ ಮಕ್ಕಳಿಗೆ ಜಾತಿ ಪ್ರಮಾಣಪತ್ರ ನೀಡಿಕೆಯಲ್ಲಿ ಸಮಸ್ಯೆ ಇದೆ ಎಂದರು. ಅನಾಥ ಮಕ್ಕಳ ಸಂಪೂರ್ಣ ವಿವರವನ್ನು ಆಯೋಗಕ್ಕೆ ಸಲ್ಲಿಸುವಂತೆ ಅಧ್ಯಕ್ಷರು ಸೂಚನೆ ನೀಡಿದರು.