ಹಾವೇರಿ: ಶೋಷಿತ ಸಮುದಾಯ ಅಭಿವೃದ್ಧಿಗಾಗಿ ತಕ್ಷಣವೇ ಸದಾಶಿವ ಆಯೋಗ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು. ಪರಿಶಿಷ್ಠ ಜಾತಿಗಳ ಹಾಗೂ ಪಂಗಡಗಳ ಶೇ 18 ಮೀಸಲಾತಿಯನ್ನು ಜನಸಂಖ್ಯಾವಾರು ಶೇ 25ಕ್ಕೆ ಹೆಚ್ಚಿಸಿ ದಲಿತದ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಡಿ.ಎಸ್.ಎಸ್ ಸಮಿತಿಯಿಂದ ಬೆಳಗಾವಿ ಸುವರ್ಣಸೌಧದ ಮುಂದೆ ಬುಧವಾರ ಪ್ರತಿಭಟನೆ ಮಾಡಲಾಯಿತು.
ಡಿ.ಎಸ್.ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ, ‘ದಲಿತರಿಗೆ ಭೂಮಿ ನೀಡಲು ಯೋಜನೆ ಇದ್ದರೂ ಕಾರ್ಯಗತವಾಗುತ್ತಿಲ್ಲ. ಪಿ.ಟಿ.ಸಿ.ಎಲ್ ಕಾಯ್ದೆಯಲ್ಲಿರುವ ಕೆಲ ಭೂಮಿ ವರ್ಗಾವಣೆ ನಿಷೇಧ ಎನ್ನುವ ಪದವನ್ನು ತಗೆದು ಹಾಕಿ ಎಸ್.ಸಿ.ಎಸ್.ಟಿ ಎಲ್ಲಾ ವರ್ಗಗಳ ಮಂಜೂರಾತಿಗಳನ್ನು ಈ ಕಾಯ್ದೆ ವ್ಯಾಪ್ತಿ ಬರುವಂತೆ ತಿದ್ದುಪಡಿ ಮಾಡಬೇಕು. 1969 ಭೂಮಿ ಮಂಜೂರಾತಿ ಶೇ 50ಕ್ಕೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಬಗರ್ ಹುಕುಂ ಭೂಮಿ ಹಂಚಿಕೆಯಲ್ಲಿಯಲ್ಲಿಯೂ ಕೂಡಾ ಶೇ 50ರಷ್ಟು ಬೂಮಿ ಮೀಸಲಿಡಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದರು. ಬೆಲೆ ಏರಿಕೆಗೆ ತಕ್ಕಂತೆ ದಲಿತ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಿಸಬೇಕು. ದಲಿತದ ವಿವಿಧ ನಿಗಮಗಳಲ್ಲಿ ಯೋಜನೆಗಳ ಅನುದಾಯವನ್ನು ಹೆಚ್ಚಿಸಬೇಕು. ದಲಿತರ ಹಕ್ಕಿಗಾಗಿ ಹೋರಾಟ ಮಾಡುವ ಸಮಯದಲ್ಲಿ ಡಿ.ಎಸ್.ಎಸ್ ಕಾರ್ಯಕರ್ತರ ಹಾಗೂ ಮುಖಂಡರ ಮೇಲೆ ಕ್ರಿಮಿನಲ್ ಕೇಸ್‌ಗಳನ್ನು ವಾಪಸ್ ಮಾಡಬೇಕು ಎಂದು ಆಗ್ರಹ ಮಾಡಿದರು.
ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಜಿಲ್ಲಾ ಸಂಚಾಲಕ ಮಾಲತೇಶ ಅಲ್ಲಾಪೂರ, ಡಿ.ಎಸ್.ಎಸ್ ನೌಕರರ ಸಂಘದ ಅಧ್ಯಕ್ಷ ನೀಲಪ್ಪ ದೊಡ್ಡಮರೆಮ್ಮನವರ, ಗಂಗಮ್ಮ ದೊಡ್ಡಮನಿ, ಮಂಜಪ್ಪ ಮರೋಳ, ಬಸಣ್ಣ ಮುಗಳಿ, ಭೀಮಣ್ಣ ಮೈಲಮ್ಮನವರ, ಮಹೇಶಪ್ಪ ಶಾಕರ್, ಹನುಮಂತ ಹಾಂವಸಿ, ನಾಗರಾಜ ಹರಿಜನ, ಪತ್ರಪ್ಪ ಹರಿಜನ ಇದ್ದರು.