ಶಹಾಪುರ: ಶಿಷ್ಯನು ಮಾಡಿದ ಎಲ್ಲ ತಪ್ಪುಗಳನ್ನು ಮನ್ನಿಸಿ ಗುರುವಾದವನು ತನ್ನ ಸಮಾಗಮಕ್ಕೆ ಕರೆದುಕೊಳ್ಳುವುದೇ ಗುರು ವಂದನಾ ಕಾರ್ಯವಾಗಿದೆ. ಗುರು ಪೂರ್ಣಿಮೆಯಂದು ಗುರು ಶಿಷ್ಯರು ಅವಿನಾಭವ ಸಂಬಂಧದಿಂದ ಶಿಷ್ಯನು ಗುರುವಿನ ದರ್ಶನಾರ್ಶಿವಾದ ಪಡೆದು ಪುನಿತವಾಗುವ ದಿನವೇ ಗುರು ಪೂರ್ಣಿಮೆ ಎಂದು ದೋರನಹಳ್ಳಿ ಹಿರೇಮಠದ ವೀರ ಮಹಾಂತ ಶಿವಾಚಾರ್ಯ ಸ್ವಾಮಿಗಳು ನುಡಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಮಹಾಂತೇಶ್ವರ ಬೆಟ್ಟದಲ್ಲಿ ಸಗರ ಗ್ರಾಮದ ಸುಕಾಲೆಪ್ಪ ತುಂಬಗಿ ದಂಪತಿಗಳಿಂದ ಗುರು ಪೂರ್ಣಿಮೆಯ ದಿನವಾದ ಮಂಗಳವಾರ ಏರ್ಪಡಿಸಲಾಗಿದ್ದ ೧೧ನೇ ವರ್ಷದ ಗುರು ವಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಗುರು ವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಗುರು ಪೂರ್ಣಿಮೆಯಂದು ನಬೋಮಂಡಲದಲ್ಲಿ ಒಂದು ವೈಚಿತ್ರ್ಯ ನಡೆದರೆ ಧಾರ್ಮಿಕವಾಗಿ ಈ ಪೌರ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಬ್ರಹ್ಮಾಂಡವನ್ನು ನಿಯಂತ್ರಿಸುವ ಸೃಷ್ಠಿ, ಸ್ಥಿತಿ, ಲಯಗಳಿಗೆ ಬ್ರಹ್ಮ, ವಿಷ್ಣು, ಮಹೇಶ್ವರರು ಗುರುಗಳು ಇರುವಂತೆ ಪ್ರತಿಯೊಬ್ಬರ ಬದುಕಿಗೆ ಗುರುಗಳು ಬೇಕು. ಗುರುವಿಲ್ಲದೆ ಏನು ಮಾಡಿದರೂ ಅದು ಪೂರ್ಣಗೊಳ್ಳದು ಎಂದು ತಿಳಿಸಿದರು. ಸನಾತನ ಕಾಲದಿಂದಲೂ ಗುರು ಪರಂಪರೆಗೆ ನಮ್ಮ ದೇಶದಲ್ಲಿ ಅಗ್ರಸ್ಥಾನವಿದೆ. ಭಕ್ತರ ಸಂಕಷ್ಟಗಳಿಗೆ ಪರಿಹಾರ ನೀಡುವ ಶಕ್ತಿ ಗುರು ಪರಂಪರೆಗೆ ಮಾತ್ರ ಇದೆ ಎಂದು ತಿಳಿಸಿದರು.
ಇದೇ ವೇಳೆ ಸುಮಾರು ೮ಜನ ನಿವೃತ್ತ ಸೈನಿಕರು, ಮಾಜಿ ಎಂಎಲ್‌ಸಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಜಿಪಂ ಸದಸ್ಯರಾದ ಶರಣಗೌಡ ಪಾಟೀಲ್ ದೇವದುರ್ಗ, ಮರಿಲಿಂಗಪ್ಪ ಕರ್ನಾಳ್, ರಾಯಪ್ಪಗೌಡ ದರ್ಶನಾಪುರ, ಚೆನ್ನಣ್ಣಗೌಡ ಶಿರವಾಳ, ಸಿದ್ದಣ್ಣಗೌಡ ಪೋ.ಪಾಟೀಲ್ ಹುರಸಗುಂಡಗಿ, ಶಿವರಾಜ ಮಾಲಿಪಾಟೀಲ್, ಕಲ್ಲಯ್ಯ ಸ್ವಾಮಿ ಚಟ್ನಳ್ಳಿ, ಎ.ಬಿ.ಪಾಟೀಲ್, ದೇವಿಂದ್ರಪ್ಪ ದೇಸಾಯಿ ಸೂಗೂರು, ಮಹಾಂತಗೌಡ ಮಾಲಿಪಾಟೀಲ್ ಸೂಗೂರು ಸೇರಿದಂತೆ ಕಾರ್ಯಕ್ರಮವನ್ನು ಆಯೋಜಿಸಿದ್ದ ತುಂಬಗಿ ಕುಟುಂಬದ ಸುಕಾಲೆಪ್ಪ ಮಹಾದೇವಮ್ಮ ಮತ್ತು ಸಂಗಣ್ಣ ತುಂಬಗಿ ದಂಪತಿಗಳು ಗುರು ವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುರಕ್ಷೆಯನ್ನು ಪಡೆದರು.