ಯಾದಗಿರಿ: ಮನುಷ್ಯ ಸಾಂಸಾರಿಕ ಮೋಹದಲ್ಲಿ ಮುಳಗಿ ಅಜ್ಞಾನದ ಅಂಧಕಾರದಲ್ಲಿ ತೊಳಲಾಡುತ್ತಾನೆ. ಇಂತಹ ಮನುಷ್ಯನಿಗೆ ಜ್ಞಾನದ ಜ್ಯೋತಿಯನ್ನು ಬೆಳಗುವುದರ ಮೂಲಕ ಬದುಕಿನಲ್ಲಿ ಬೆಳಕನ್ನು ನೀಡುವವನೇ ಗುರು ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.
ಮಂಗಳವಾರ ಶ್ರೀಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು, ಗುರು ಆದವನು ಶಿಷ್ಯನನ್ನು ಭಕ್ತಿಯ ಶಕ್ತಿಯಿಂದ ಬಲಿಷ್ಠರನ್ನಾಗಿ ಮಾಡುತ್ತಾನೆ. ದುಷ್ಠ ಸಂಘ ಬಿಡಿಸಿ ಸತ್ಸಂಗವನ್ನು ಕೊಡಿಸಿ ಆ ಮೂಲಕ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಅಗತ್ಯವೆಂದು ಹೇಳಿದರು.
ಗುರು ಆದವನು ಯಾವತ್ತೂ ಶಿಷ್ಯರ ಒಳಿತನ್ನೇ ಬಯಸುತ್ತಾನೆ. ತನ್ನ ಬದುಕಿನಲ್ಲಿ ಸಂಪಾದಿಸಿದ ಜ್ಞಾನ, ತಪ್ಪಸ್ಸು, ವಿದ್ಯೆಗಳನ್ನು ಶಿಷ್ಯನಿಗೆ ಧಾರೆ ಎರೆಯುವುದರ ಮೂಲಕ ಬದುಕನ್ನು ರೂಪಿಸಿತ್ತಾನೆ. ವಿನಯ, ವಿವೇಕವನ್ನು ಕಲಿಸುವುದರ ಮೂಲಕ ಶಿಷ್ಯನ ಜೀವನವನ್ನು ಗುರು ಆದವನು ಉದ್ಧರಿಸುತ್ತಾನೆ ಎಂದು ತಿಳಿಸಿದರು.
ಗುರು ತನ್ನ ಶಿಷ್ಯಕೋಟಿಯ ಅಂತರಂಗವನ್ನು ತೊಳೆಯುತ್ತಾನೆ. ತನ್ನ ಶಕ್ತಿಯಿಂದ ಶಿಷ್ಯರನ್ನು ಶುದ್ಧಾತ್ಮರನ್ನಾಗಿ ಮಾಡುವುದರ ಮೂಲಕ ಇಡೀ ಮನುಕುದ ಏಳಿಗೆಯನ್ನು ಬಯಸುವವನೇ ನಿಜವಾದ ಗುರು ಎಂದೆನಿಸಿಕೊಳ್ಳುತ್ತಾನೆ ಎಂದರು.
ಗುರು ಎಂದರೆ ಜ್ಞಾನ, ಗುರು ಎಂದರೆ ಬೆಳಕು. ಶಿಷ್ಯನ ಜೀವನದಲ್ಲಿನ ಕತ್ತಲೆ ಕಳೆದು ಅಲ್ಲಿ ಜ್ಞಾನ ಬೆಳಕನ್ನು ಮೂಡಿಸಿ ಶಿಷ್ಯನ ಬಾಳು ಬೆಳಗುತ್ತಾನೆ. ಅದಕ್ಕಾಗಿ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅಘಾದವಾದ ಸ್ಥಾನವಿದ್ದು, ‘ನ ಗುರು ರೋ ರಧೀಕಂ’ ಎಂದು ಹೇಳಲಾಗಿದೆ ಎಂದು ವಿವರಿಸಿದರು.
ಬೆಳಗ್ಗೆ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನೆರವೇರಿತು. ನಂತರ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಲಾಯಿತು. ತರುವಾಯ ವಿಧ್ವತ್ ಜನರಿಂದ ಗುರುಪೂರ್ಣಿಮೆಯ ಮಹತ್ವದ ಬಗ್ಗೆ ವಿಶೇಷ ಅನುಭಾವ ನೀಡಲಾಯಿತು.ಆಗಮಿಸಿದ ಎಲ್ಲ ಭಕ್ತಾಧಿಕಾರಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಡಾ.ಸುಭಾಶ್ಚಂದ್ರ ಕೌಲಗಿ, ಎಸ್.ಎನ್.ಮಿಂಚನಾಳ ಸೇರಿದಂತೆ ಅನೇಕ ಭಕ್ತರು ಇದ್ದರು.