ಕಲಬುರಗಿ: ಕಳೆದ ನಾಲ್ಕು ದಿನದಿಂದ ಜಿಲ್ಲಯ ಯಡ್ರಾಮಿ ತಾಲೂಕಿನಲ್ಲಿ ರೈತರು, ವಿವಿಧ ಸಂಘಟನೆಗಳ ಮುಖಂಡರು ಬೆಳೆಹಾನಿ ಪರಿಹಾರ ಮಾಹಿತಿ ಅಪ್‍ಡೇಟ್ ಮಾಡುವಲ್ಲಿನ ವಿಳಂಬ ಪ್ರಶ್ನಿಸಿ ಆರಂಭಿಸಿರುವ ಅಹೋರಾತ್ರಿ ಧರಣಿ ವಿಚಾರ ಬಳಗಾವಿ ಸದನದ ಕೊನೆಯ ದಿನವಾದ ಶುಕ್ರವಾರ ಸದನದಲ್ಲಿ ಪ್ರತಿಧ್ವನಿಸಿದೆ.
ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರು ಆಗಿರುವ ಡಾ. ಅಜಯ್ ಸಿಂಗ್ ಈ ವಿಚಾರವಾಗಿ ಸರಕಾರದ ಗಮನ ಸೆಳೆಯುವ ಗೊತ್ತುವಳಿಯನ್ನು ಸದನದಲ್ಲಿ ಮಂಡಿಸಿದರು.
ಕಳೆದ ಸೆಪ್ಟೆಂಬರ್, ಅಕ್ಬೋಬರ್ ಹಾಗೂ ನವ್ಹೆಂಬರ್ ತಿಂಗಳ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಯ ಜಂಟಿ ಸಮೀಕ್ಷೆ ಮಾಡಿರುವ ತಾಲೂಕು ಆಡಳಿತ ಸದರಿ ಮಾಹಿತಿಯನ್ನು ಆನ್‍ಲೈನ್ ಅಪ್‍ಡೆಟ್ ಮಾಡುವಲ್ಲಿ ವಿಳಂಬ ಮಾಡಿದೆ. ಅಷ್ಟರೊಳಗೆ ಲಾಗಿನ್ ಬಂದ್ ಆಗಿಬಿಟ್ಟಿದೆ. ಇದರಿಂದ ಯಡ್ರಾಮಿ ಭಾಗದ ಬೆಳೆಹಾನಿಯಾದ ಸಾವಿರಾರು ರೈತರು ಪರಿಹಾರ ದೊರಕದ ವಂಚಿತರಾಗುವ ಸಾಧ್ಯತೆಗಳಿವೆ. ಆದ್ದರಿಂದ ಸರಕಾರ ತಕ್ಷಣ ಯಡ್ರಾಮಿ ಭಾಗದಲ್ಲಿನ ಬೆಳೆಹಾನಿ ಮಾಹಿತಿ ಲಾಗಿನ್ ಮಾಡಲು ಅವಕಾಶವಾಗುವಂತೆ ಲಾಗಿನ್ ಪೆÇೀರ್ಟಲ್ ಮತ್ತೊಮ್ಮೆ ಓಪನ್ ಮಾಡಿ ಕೊಡಬೇಕು. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ ಎಂದರು.
ಡಾ. ಅಜಯ್ ಸಿಂಗ್ ಅವರು ಯಡ್ರಾಮಿ ರೈತರು ಎದುರಿಸುತ್ತಿರುವ ತೊಂದರೆ ಬಗ್ಗೆ ಸರಕಾರದ ಗಮನ ಸೆಳೆದಾಗ ಸದನದಲ್ಲಿ ಹಾಜರಿದ್ದ ಸಚಿವ ಗೋವಿಂದ ಕಾರದಜೋಳ ಅವರು ಈ ವಿಚಾರವಾಗಿ ತಾವು ಖುದ್ದು ಪರಿಶೀಲನೆ ನಡೆಸೋದಾಗಿಯೂ ಹೇಳಿದರಲ್ಲದೆ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಪರಿಶೀಲನೆ ನಡೆಸಿ ಏನಾಗಿದೆ ಎಂಬುದನ್ನು ತಿಳಿದು ಮುಂದಿನ ಅಗತ್ಯ ಕ್ರಮ ದರುಗಿಸುವ ಭರವಸೆ ನೀಡಿದರು.
ಸದನದಲ್ಲಿ ಮಾತನಾಡಿದ ಡಾ. ಅಜಯ್ ಸಿಂಗ್ ಕಂದಾಯ ಹಾಗೂ ಕೃ,ಇ ಇಲಾಖೆಗಳು ಬೆಳೆಹಾನಿಯ ಜಂಟಿ ಸಮೀಕ್ಷೆ ನಡೆಸಿ ಮಾಹಿತಿ ಲಾಗಿನ್‍ನಲ್ಲಿ ಅಳವಡಿಸುವಲ್ಲಿ ವಿಫಲವಾಗಿದ್ದರಿಂದ ರೈತರೆಲ್ಲರಿಗೂ ಬೆಳೆಹಾನಿ ಬಾರದೆ ವಂಚಿತರಾಗುವ ಬೀತಿ ಎದುರಾಗಿದೆ. ಇದು ರೈತರ ತಪ್ಪಲ್ಲ, ಅದಿಕಾರಿಗಳ ವಿಳಂಬ ಧೋರಣೆಯೇ ಇದಕ್ಕೆ ಕಾರಣ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಯಡ್ರಾಮಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಆಗಬಾರದು ಎಂಬುದೇ ತಮ್ಮ ಕಳಕಳಿಯಾಗಿದೆ ಎಂದು ಶಾಸಕ ಡಾ. ಅಜಯ್ ಸಿಂಗ್ ಸದನದ ಗಮನ ಸಳೆದರು.