ಗದ್ದಲದಲ್ಲೇ ತೆರೆ ಕಂಡ ಅಧಿವೇಶನ ಕಲಾಪ

0
25

ಬೆಂಗಳೂರು: ಗಡಿ ಜಿಲ್ಲೆ ‘ಕುಂದಾನಗರಿ’ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜರುಗಿದ ಹತ್ತು ದಿನಗಳ ವಿಧಾನ ಮಂಡಲ ಅಧಿವೇಶನದಲ್ಲಿ ಹೆಚ್ಚು ಸುದ್ದಿ, ಸದ್ದು ಮಾಡಿದ್ದು ‘ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ(ಮತಾಂತರ ನಿಷೇಧ) ವಿಧೇಯಕ’. ಆದರೆ, ಕೊನೆಯ ಕ್ಷಣದಲ್ಲಿ ಸರಕಾರ ಪರಿಷತ್‌ನಲ್ಲಿ ಮಸೂದೆ ಮಂಡನೆಯ ತೀರ್ಮಾನದಿಂದ ಹಿಂದೆ ಸರಿದು ಮುಖಭಂಗ ಅನುಭವಿಸಿದೆ.

ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನ ಸೇರಿದಂತೆ ಆ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆ-ಪರಿಹಾರಕ್ಕೆ ಕೆಲಕಾಲ ಅವಕಾಶ ದಕ್ಕಿದರೂ ಹೆಚ್ಚಿನ ಒತ್ತು ಸಿಕ್ಕಿಲ್ಲ. ಹದಿನೈದು ವರ್ಷಗಳಲ್ಲಿ 10 ಅಧಿವೇಶನ ಆ ಭಾಗದಲ್ಲಿ ನಡೆದರೂ ಉತ್ತರ ಭಾಗದ ಜನರ ನಿರೀಕ್ಷೆ ಈಡೇರಿಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ. ಡಿ.13ರಿಂದ ಆರಂಭ ವಾದ ವಿಧಾನ ಮಂಡಲ ಅಧಿವೇಶನ 24ಕ್ಕೆ ಕೊನೆಗೊಂಡಿದ್ದು, ವಿಧಾನಸಭೆ ಒಟ್ಟು 52 ಗಂಟೆಗಳ ಕಾಲ, ಪರಿಷತ್ ಕಲಾಪವೂ ಹೆಚ್ಚಿನ ಅವಧಿ ನಡೆಸಿದರೂ ಎರಡೂ ಸದನದಲ್ಲಿ ಸದಸ್ಯರ ಗೈರು ಹಾಜರು ಎದ್ದು ಕಾಣುತ್ತಿತ್ತು.

Contact Your\'s Advertisement; 9902492681

ಒಟ್ಟಾರೆ ಶೇ.73ರಿಂದ 75ರಷ್ಟು ಸದಸ್ಯರ ಹಾಜರಾತಿ ಇತ್ತು ಎಂದು ಸ್ಪೀಕರ್ ಕಾಗೇರಿ ತಿಳಿಸಿದ್ದರೂ, ಆಡಳಿತ ಮತ್ತು ಪ್ರತಿಪಕ್ಷ ಶಾಸಕರಲ್ಲಿ ಸದನದಲ್ಲಿ ಪಾಲ್ಗೊಳ್ಳುವ ಉತ್ಸಾಹವೇ ಅಷ್ಟಾಗಿ ಕಂಡುಬರಲಿಲ್ಲ. ಕೋವಿಡ್ ರೂಪಾಂತರಿ ಒಮೈಕ್ರಾನ್ ಆತಂಕದಲ್ಲಿ ಕಲಾಪ ಆರಂಭಗೊಂಡರೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಉತ್ತರ ಕರ್ನಾಟಕ ಭಾಗದ ಶಾಸಕರೇ ಹೆಚ್ಚಾಗಿ ಕಲಾಪದಲ್ಲಿ ಭಾಗವಹಿಸಲಿಲ್ಲ ಎಂಬುದು ಗಮನಾರ್ಹವಾಗಿದೆ.

ಗಮನ ಸೆಳೆದ ಘಟನೆಗಳು: ಬೆಳಗಾವಿ ಅಧಿವೇಶನದಲ್ಲಿ ಎಂಇಎಸ್ ಪುಂಡಾಟದ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ, ಮತಾಂತರ ನಿಷೇಧ ವಿಧೇಯಕ ಮಂಡನೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಾನೂನು ಸಚಿವ ಮಾಧುಸ್ವಾಮಿ ಹಾಕಿದ ಪಟ್ಟು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕ್ಷಮೆಯಾಚನೆ, ಸಚಿವ ಬೈರತಿ ಬಸವರಾಜ್ ಮೇಲಿನ ಭೂ ಕಬಳಿಕೆ ಆರೋಪವು ಸೇರಿದಂತೆ ಹಲವು ವಿಚಾರಗಳು ಕಲಾಪದಲ್ಲಿ ಗಮನ ಸೆಳೆದವು.

ಇದೇ ವೇಳೆ ವಿಧಾನ ಮಂಡಲ ಮೊಗಸಾಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಶಾಸಕರೇ ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕುತೂಹಲಕ್ಕೆ ಕಾರಣವಾಗಿತ್ತು. ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ‘ಏಕಾಂಗಿ’ಯನ್ನಾಗಿಸಿ ವೀರಾವೇಶದಲ್ಲಿ ಅನುಮೋದನೆ ಪಡೆದುಕೊಂಡರೂ ಪರಿಷತ್‌ನಲ್ಲಿ ಸದಸ್ಯರ ಕೊರತೆ ಕಾರಣಕ್ಕೆ ಮಂಡನೆ ಮಾಡದೆ ಹಿಂಪಡೆದಿದೆ. 2022ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಮಂಡಿಸಲಾಗುವುದೆಂದು ಸರಕಾರ ಪ್ರಕಟಿಸಿದೆ.

2006ರಿಂದ ಈವರೆಗೆ ಒಟ್ಟು 15 ವರ್ಷಗಳಲ್ಲಿ 10 ಅಧಿವೇಶನ ಉತ್ತರ ಕರ್ನಾಟಕ ಭಾಗದಲ್ಲಿ ಜರುಗಿದ್ದರೂ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆ ಈಡೇರಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಆಡಳಿತ ಪಕ್ಷದ ಜೊತೆಗೆ ಪ್ರತಿಪಕ್ಷಗಳೂ ಈ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಸೋತಿವೆ. ಧರಣಿ, ಗದ್ದಲದಲ್ಲೇ ಕಲಾಪ ಮುಕ್ತಾಯ ಕಂಡಿದ್ದು ಬೆಳಗಾವಿ ಅಧಿವೇಶನ ಕೇವಲ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಹಿಂದುಳಿಯಲು ಸರಕಾರಗಳ ಜೊತೆಗೆ ಈ ಭಾಗದ ಜನಪ್ರತಿನಿಧಿಗಳ ಹೊಣೆಗೇಡಿತನವೂ ಕಾರಣ. ಸುವರ್ಣವಿಧಾನಸೌಧ ನಿರ್ಮಿಸಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಗೆ. ಆದರೆ, ಆ ಕಾರ್ಯ ಆಗುತ್ತಿಲ್ಲ ಎಂಬುದು ಅತ್ಯಂತ ಬೇಸರದ ಸಂಗತಿಯಾಗಿದೆ. -ಅಶೋಕ ಚಂದರಗಿ, ಅಧ್ಯಕ್ಷರು ಬೆಳಗಾವಿ ಜಿಲ್ಲಾ ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿ.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಒಟ್ಟು 6 ಗಂಟೆಗಳ ಕಾಲ ಚರ್ಚೆ ನಡೆದಿದ್ದು, ಇನ್ನೂ ಹೆಚ್ಚಿನ ಸಮಯಾವಕಾಶ ನೀಡಬೇಕೆಂಬ ಸದಸ್ಯರ ಅಪೇಕ್ಷೆ ಈಡೇರಿಸಲು ಸಾಧ್ಯವಾಗಲಿಲ್ಲ. ಹೆಚ್ಚು ದಿನಗಳ ಕಾಲ ಅಧಿವೇಶನ ನಡೆಯಬೇಕು. ಆ ನಿಟ್ಟಿನಲ್ಲಿ ಸರಕಾರದೊಂದಿಗೆ ಚರ್ಚಿಸಲಾಗುವುದು. ಬೆಳಗಾವಿ ಸುವರ್ಣವಿಧಾನಸೌಧದಲ್ಲಿ ಅಧಿವೇಶನ ಯಶಸ್ವಿಯಾಗಿ ನಡೆದಿದೆ. -ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

ಬೆಳಗಾವಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ ಉದ್ದೇಶವೇ ಉತ್ತರ ಕರ್ನಾಟಕ ಭಾಗದ ಜನರಿಗೆ ನ್ಯಾಯ ಒದಗಿಸುವುದು. ಬಿಜೆಪಿಸರಕಾರದ ಅಲಕ್ಷ ಧೋರಣೆಯಿಂದಾಗಿ ಈ ಮೂಲ ಉದ್ದೇಶದ ಈಡೇರಿಕೆ ಆಗುತ್ತಿಲ್ಲ. ಇದು ಉತ್ತರ ಕರ್ನಾಟಕ ವಿರೋಧಿ ಸರಕಾರ’ -ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಕೇವಲ ಚರ್ಚೆಗೆ ಸೀಮಿತವಾಯಿತು. ಆದರೆ, ಫಲಿತಾಂಶವೇನೂ ಇಲ್ಲ. ವಿಪಕ್ಷ ನೀಡಿದ ಸಲಹೆಗಳನ್ನು ಸರಕಾರ ಪರಿಗಣಿಸುತ್ತಿಲ್ಲ. ಕೇವಲ ನೋಡುತ್ತೇವೆ, ಮಾಡುತ್ತೇವೆ ಎಂದಷ್ಟೇ ಹೇಳುತ್ತಾರೆ. ಹೀಗಾಗಿ ಅಧಿವೇಶನ ವಿಫಲವಾಗಿದೆ. ಕಿತ್ತೂರು ಕರ್ನಾಟಕವನ್ನೇನೋ ಘೋಷಣೆ ಮಾಡಿದರೂ, ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನೇ ನೀಡುತ್ತಿಲ್ಲ. -ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here