ಕಲಬುರಗಿ: ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ತತ್ವಾದರ್ಶಗಳು ನಮ್ಮೆಲ್ಲರಿಗೂ ಮಾದರಿ ಎಂದು ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು. ನಗರದ ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಹತ್ತಿರದ ಅಖಿಲ ಕರ್ನಾಟಕ ರಾಜ್ಯ ಬೀದಿವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ೧೧೭ನೇ ಜನ್ಮದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಾಂಬೆಯ ಕೀರ್ತಿವೆತ್ತ ಕನ್ನಡ ನೆಲದ ದಿವ್ಯ ಚೇತನರಾದ ರಾಷ್ಟ್ರ ಕವಿ ಕುವೆಂಪು ವಿಶ್ವ ಮಾನವತೆಯ ತಿಲಕರಾಗಿದ್ದಾರೆ. ಜಾತಿ ಧರ್ಮ ರಹಿತ ಸಮಾಜ ನಿರ್ಮಾಣಕ್ಕೆ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ವೇದಮೂರ್ತಿ, ಶಿವಪ್ಪ ಬಾಗೋಡಿ, ಬಾಬುಮಿಯಾ ಶೇಖ ಪರಿಟ, ಹುಸೇನ, ಶಿವು ಮಡಕಿ, ರಾಘವೇಂದ್ರ ಕಾಮದಾಸಿ, ಗಾಯತ್ರಿ, ಲಕ್ಷ್ಮಿ ಬಾಬಜಿ, ರುಕ್ಮೀಣಿ ,ಜೈ ಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಹಾಗೂ ಬೀದಿಬದಿ ವ್ಯಾಪಾರಿಗಳ ಸಂಘದ ಪ್ರಮುಖರು ಇದ್ದರು.