ಕಾಂಗ್ರೆಸ್ ನಾಯಕರು ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿದ್ದಾರೆ: ಕಾರಜೋಳ

0
16

ಬೆಳಗಾವಿ: ‘ಮೇಕೆದಾಟು ಯೋಜನೆ ವಿಚಾರವಾಗಿ ಸ್ಫೋಟಕ ಮಾಹಿತಿ ನೀಡುವುದಾಗಿ ಹೇಳಿದ್ದೇ ತಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಮೈಮೇಲೆ ದೆವ್ವ ಬಂದವರಂತೆ ವರ್ತಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನ ಪುಡಿ ರಾಜಕಾರಣಿಗಳಿಗೆ ಸಂಸ್ಕಾರವಿಲ್ಲ. ನನ್ನ ವಿರುದ್ಧ ಮನಬಂದಂತೆ ಮಾತನಾಡುತ್ತಿದ್ದಾರೆ. ಆದರೆ, ನಾನು ಹೊಣೆಗೇಡಿತನದಿಂದ ಮಾತನಾಡುವ ವ್ಯಕ್ತಿಯಲ್ಲ. ಮೇಕೆದಾಟು ವಿಷಯ ನ್ಯಾಯಾಲಯ ಅಂಗಳದಲ್ಲಿರುವುದರಿಂದ ತೀರ್ಪು ಪ್ರಕಟವಾದ ನಂತರ ದಾಖಲೆ ಬಿಡುಗಡೆಗೊಳಿಸುತ್ತೇನೆ’ ಎಂದರು.

Contact Your\'s Advertisement; 9902492681

‘ನಾನು ಬುಟ್ಟಿಯಲ್ಲಿ ಹಾವು ಇದೆ ಎಂದು ಹೇಳಿದ್ದೇನೆಯೇ ಹೊರತು ತೋರಿಸಿಲ್ಲ. ಆದರೆ, ಕಾಂಗ್ರೆಸ್ ನವರು ಹಾವಿಗಾಗಿ ಹುಡುಕಾಟ ನಡೆಸಿದ್ದಾರೆ’ ಎಂದು ತಿಳಿಸಿದರು.

‘ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ. ಆ ಬಗ್ಗೆ ಧ್ವನಿ ಎತ್ತದ ಸಿದ್ದರಾಮಯ್ಯ ಆಡಳಿತದಿಂದ ಹೊರಗೆ ಇರುವ ಅಲ್ಲಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಬುದ್ಧಿ ಹೇಳಿ ಎಂದು ಹೇಳಿಕೆ ನೀಡುವುದು ಹಾಸ್ಯಾಸ್ಪದವಾಗಿದೆ’ ಎಂದ ಕಾರಜೋಳ, ‘ನಾವು ಅನಧಿಕೃತವಾಗಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುತ್ತಿಲ್ಲ. ನೆಲ ಹಾಗೂ ಜಲದ ವಿಚಾರವಾಗಿ ನಮ್ಮ ಸರ್ಕಾರ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಮಾಧ್ಯಮಗಳ ಸೃಷ್ಟಿ. 2023ರ ವಿಧಾನಸಭೆ ಚುನಾವಣೆಯವರೆಗೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವಲ್ಲಿ ಸಂಶಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೊರೊನಾ 3ನೇ ಅಲೆ ತಡೆಗೆ ಗಡಿಯಲ್ಲಿ ಹೆಚ್ಚಿನ ಚೆಕ್ ಪೋಸ್ಟ್ ಸ್ಥಾಪಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಯಾವುದೇ ಜಾತ್ರೆ, ಸಭೆ-ಸಮಾರಂಭಗಳಲ್ಲಿ 300ಕ್ಕೂ ಅಧಿಕ ಜನ ಸೇರದಂತೆ ನಿರ್ದೇಶನ ನೀಡಲಾಗಿದೆ. ಜನರು ಸಹಕರಿಸಿದರೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಈ ಬಾರಿ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ಸರಳವಾಗಿ ರಾಯಣ್ಣನ ಉತ್ಸವ ಆಚರಿಸಲಾಗುವುದು. ಅನಿವಾರ್ಯತೆ ಸೃಷ್ಟಿಯಾದರೆ ಜಾತ್ರೆಗಳಿಗೆ ನಿರ್ಬಂಧ ಹೇರಲಾಗುವುದು’ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here