ಬೆಂಗಳೂರು: ಇತ್ತೀಚಿಗೆ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರು ಇಂದು ವಿಧಾನ ಸಭೆ ಕಲಾಪದಲ್ಲಿ ಯು ಟರ್ನ್ ಹೊಡೆದು, ತಮ್ಮ ರಾಜೀನಾಮೆ ವಾಪಸ್ ಪಡೆದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಂತರ ಹೇಗೆ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಹೈ ಕಮಾಂಡ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾಡುವ ವಿಜ್ಞಾಪನೆಗಳು.
- ಕರ್ನಾಟಕದಲ್ಲಿ ನಡೆಯುತ್ತಿರುವ ಬಹುತೇಕ ರಾಜಕೀಯ ವಿದ್ಯಮಾನಗಳ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಹಾಗೂ ಕಾರ್ಯಕರ್ತರಿಗೆ ಬಹುತೇಕ ಅರಿವಿದೆ.
- ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ವಿದ್ಯಾಮಾನಗಳಿಂದ ಬೇಸರವಾಗಿ (ಕಾರಣಗಳನ್ನು ಅನೇಕ ಬಾರಿ ಮಾಧ್ಯಮ ಮುಖಾಂತರ ತಿಳಿಸಿದ್ದೇನೆ) ದಿನಾಂಕ 06-07-2019 ರಂದು ನಾನು ಆಯ್ಕೆಯಾಗಿರುವ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ.
- ನಾನೆಂದು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟವನಲ್ಲ ಸ್ಥಾನಮಾನ ಪಡೆಯಲು ನಾನು ಎಂದೂ ಆಸೆಪಟ್ಟವನಲ್ಲ.
- ಕಳೆದ 45 ವರ್ಷದ ಸುಧೀರ್ಘ ರಾಜಕೀಯ ಜೀವನದಲ್ಲಿ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ, 7 ಬಾರಿ ಶಾಸಕನಾಗಿ ಪಕ್ಷದ ಶ್ರೇಯೋಭಿವೃದ್ದಿಗಾಗಿ ಹಾಗೂ ನನ್ನ ಮತಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಸಚಿವನಾಗಿದ್ದಂತಹ ಸಂದರ್ಭದಲ್ಲಿ ರಾಜ್ಯಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ.
- ಕಾಂಗ್ರೆಸ್‍ನ ಹಲವಾರು ವಿದ್ಯಾಮಾನಗಳಿಂದ ಶಾಸಕ ಸ್ಥಾನಕ್ಕೆ ಮಾತ್ರ ನನ್ನ ರಾಜೀನಾಮೆ ಹೊರತು ಪಕ್ಷಕ್ಕಲ್ಲ ಎಂದು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ.
- ಕಾಂಗ್ರೆಸ್ ನ ಹಿರಿಯನಾಯಕರು ರಾಜೀನಾಮೆ ವಾಪಾಸ್ ಪಡೆದು ಪಕ್ಷದಲ್ಲಿರುವಂತೆ ಕೋರಿರುತ್ತಾರೆ. ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆ ವಾಪಾಸ್ ಪಡೆಯಲು ಮನವಿ ಮಾಡಿಕೊಂಡಿದ್ದಾರೆ.
- ಪಕ್ಷದ ಮುಂದಿರುವ ಪ್ರಸಕ್ತ ಸವಾಲು ಹಾಗೂ ಸಂದಿಗ್ಧ ಪರಿಸ್ಥಿತಿಯ ಹಿನ್ನಲೆಯಲ್ಲಿ ಹಾಗೂ ಪಕ್ಷದ ನಾಯಕರ ಮನವಿಗೆ ಗೌರವ ನೀಡಿ ನಾನು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ವಾಪಸ್ ಪಡೆಯುತ್ತಿದ್ದೇನೆ. ಈ ಕುರಿತು ಸ್ಪೀಕರ್ ಗೆ ಮಾಹಿತಿ ನೀಡುತ್ತೇನೆ.
ತಮ್ಮ ವಿಶ್ವಾಸಿ
ರಾಮಲಿಂಗಾ ರೆಡ್ಡಿ