ಸುರಪುರ: ನಗರದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಲಾಗಿದೆ.
ಸಭೆಯ ನೇತೃತ್ವ ವಹಿಸಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದು,ಇದರಿಂದ ರಾಜ್ಯಾದ್ಯಂತ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.ಅದರಂತೆ ನಮ್ಮ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ನಿಯಮಗಳನ್ನು ಎಲ್ಲರು ಪಾಲಿಸಬೇಕು.ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಹಾಗು ಸ್ಯಾನಿಟೈಜರ್ ಬಳಸುವುದು ಕಡ್ಡಾಯವಾಗಿದೆ,ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಅಲ್ಲದೆ ನಮ್ಮ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಮಾತನಾಡಿ,ಕೋವಿಡ್ ಮೂರನೇ ಅಲೆ ಬರುವ ಮುನ್ನವೆ ತಾಲೂಕಿನ ಆಸ್ಪತ್ರೆಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.ತಾಲೂಕು ಆಸ್ಪತ್ರೆಯಲ್ಲಿ ೧೦ ವೆಂಟಿಲೇಟರ್ ಮತ್ತು ೧೦ ಐ.ಸಿ.ಯು ಬೆಡ್,ಜಿಲ್ಲಾಡಳಿತ ನೀಡಿದ ೧೯ ವೆಂಟಿಲೇಟರ್,೧೦೦ ಆಕ್ಸಿಜನ್ ಬೆಡ್,ಕೆಂಭಾವಿಯಲ್ಲಿ ೩೦,ಕೊಡೇಕಲ್ ೫೦,ನಗರ ಆಸ್ಪತ್ರೆಯಲ್ಲಿ ೫೦ ಹಾಗು ೫ ಲೀಟರ್ ಸಾಮರ್ಥ್ಯದ ೨೩೪ ಕಾನ್ಸಂಟ್ರೇಟರ್,೧೦ ಲೀಟರ್ ಸಾಮರ್ಥ್ಯದ ೯೬,೭೩ ಜಂಬೋ,೫೩ ಸಣ್ಣ ಸಿಲಿಂಡರ್ ಹಾಗು ಹುಣಸಗಿ ಮತ್ತು ಕೆಂಭಾವಿಯಲ್ಲೂ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೇವೆಗಾಗಿ ಒಟ್ಟು ೬ ಕಮಿಟಿಗಳನ್ನು ಮಾಡಿಕೊಳ್ಳಲಾಗಿದೆ,ವೈದ್ಯರು,ನರ್ಸ್,ಆಂಬ್ಯುಲೆನ್ಸ್,ಸಿಬ್ಬಂದಿಗಳ ಕಮಿಟಿ ಮಾಡಲಾಗಿದೆ.
ಅಲ್ಲದೆ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಟ್ಟುನಿಟ್ಟಿನ ಕೆಲಸ ಮಾಡಬೇಕಾಗಿದೆ ಎಂದರು.ಮುಂದೆ ಕೋವಿಡ್ ಪ್ರಕರಣ ಹೆಚ್ಚಾದಲ್ಲಿ ಹಾಸ್ಟೆಲ್‌ಗಳನ್ನು ಪಡೆದುಕೊಳ್ಳಬೇಕಾಗಲಿದೆ ಎಂದು ತಿಳಿಸಿದರು.ಒಮೈಕ್ರಾನ್ ಮಾರಣಾಂತಿಕ ಕಾಯಿಲೆ ಅಲ್ಲ ಅದರ ಬಗ್ಗೆ ಜನರು ಭಯಪಡುವ ಬದಲಾಗಿ ಮುಂಜಾಗೃತೆ ವಹಿಸಿದರೆ ಸಾಕು ಎಂದರು.ಅಲ್ಲದೆ ಕೊರೊನಾ ವಾರಿಯರ್ಸ್‌ಗಳಿಗೆ ಮತ್ತು ೬೦ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ನೀಡುವ ಕಾರ್ಯವನ್ನು ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಡಾ:ದೇವರಾಜ ಬಿ ಮಾತನಾಡಿ,ಈಗಾಗಲೆ ನಮ್ಮ ಸುರಪುರ ಪೊಲೀಸ್ ಉಪ ವಿಭಾಗದಲ್ಲಿ ಒಟ್ಟು ೫ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು,ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ಹಗಲಿರಳು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಅಲ್ಲದೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.ಮಾಸ್ಕ್ ಧರಿಸದವರಿಗೆ ದಂಡವನ್ನು ವಿಧಿಸಲಾಗುತ್ತಿದೆ ಎಂದರು.ಕೋವಿಡ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಅಂತವರ ವಿರುದ್ಧ ಸೆಕ್ಸನ್ ೫೨ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಮೂಡಲದಿನ್ನಿ ಮಾತನಾಡಿದರು.ವೇದಿಕೆ ಮೇಲೆ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಹಾಗು ಕೆಂಭಾವಿ ಮತ್ತು ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿಗಳಿದ್ದರು.ಸಭೆಯಲ್ಲಿ ಪಿಐ ಸುನೀಲಕುಮಾರ್ ಮೂಲಿಮನಿ,ಸಿಡಿಪಿಒ ಲಾಲಸಾಬ್ ಪೀರಾಪುರ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತಿಪ್ಪಾರಡ್ಡಿ ಪಾಟೀಲ್,ಎಪಿಎಮ್‌ಸಿ ವ್ಯವಸ್ಥಾಪಕ ನಿಸಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳಿದ್ದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ ಸ್ವಾಗತಿಸಿ ವಂದಿಸಿದರು.