ಕಲಬುರಗಿ : ಬರುವ ಕೇಂದ್ರ ಸರಕಾರದ ಬಜೆಟ್ ನಲ್ಲಿ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಏಮ್ಸ್, ನೀಮ್ಝ್ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಕಲಬುರಗಿ ರಿಂಗ್ ರಸ್ತೆ ಸೇರಿದಂತೆ ಉದ್ಯೋಗ ಸೃಷ್ಟಿಯ ಯೋಜನೆಗಳು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂಜೂರಾತಿ ಮಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೇಲೆ ಸಂಘಟಿತ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸುವದು ಅತಿ ಅವಶ್ಯವಾಗಿದೆ.
ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯ ಅನುಷ್ಠಾನದ ಬಗ್ಗೆ ಕಾಂಗೇಸ್ ಪಕ್ಷದ ರಾಜ್ಯ ಸಭೆಯ ಪ್ರತಿಪಕ್ಷ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕ ಸಭಾ ಸದಸ್ಯರಾದ ಉಮೇಶ ಜಾಧವ ರವರು ಪ್ರತಿಷ್ಠೆಯ ಸವಾಲಾಗಿ ಸ್ವೀಕರಿಸಲು ಕಲಬುರಗಿ ಜನಮಾನಸದ ವತಿಯಿಂದ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಉಭಯ ನಾಯಕರಲ್ಲಿ ಆಗ್ರಹಿಸಿದೆ.
ಕೇಂದ್ರ ಸರಕಾರದ ಬರುವ ಬಜೆಟ್ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕದ ಸಂಸದರು, ಕೇಂದ್ರ ಸಚಿವರಾದ ಭಗವಂತ ಖೂಬಾರವರ ನೇತೃತ್ವದಲ್ಲಿ ಒಂದು ಕಡೆ ಸೇರಿ ನಮ್ಮ ಭಾಗಕ್ಕೆ ಕೇಳಬೇಕಾದ ಯೋಜನೆಗಳ ಬಗ್ಗೆ ಮತ್ತು ಈಗಾಗಲೇ ಘೋಷಣೆ ಮಾಡಿರುವ ಯೋಜನೆಗಳು ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಮಾಡುವಂತಹ ಹೊಸ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಪಕ್ಷಾತೀತವಾಗಿ ಸಂಘಟಿತ ಒತ್ತಾಯ ತರಲು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಭಗವಂತ ಖೂಬಾರವರು ವಿಶೇಷ ಮುತುವರ್ಜಿ ವಹಿಸಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಆಗ್ರಹಿಸಿದೆ.