ಆಳಂದ: ಅನೇಕ ಶಿಕ್ಷಕರು ತಮ್ಮ ಬೋಧನಾ ಕರ್ತವ್ಯದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು ಯಾವುದಾದರೂ ಇದ್ದರೆ, ಸಂಬಂಧಿತ ಶಿಕ್ಷಕರು ಕಚೇರಿಗೆ ಅಲೆದಾಟ ಆರಂಭಿಸಿದರೆ ತಮ್ಮ ಕರ್ತವ್ಯದ ಸಮಯ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸಲು ಶಿಕ್ಷಕರ ಸಂಘಟನೆಗಳು ಮುತುವರ್ಜಿ ವಹಿಸಿ ಸಮಸ್ಯೆಗಳನ್ನು ಪರಿಹರಿಸುವಂತಹ ಶಿಕ್ಷಕರ ಸಂಘಟನೆಗಳು ಪ್ರಸ್ತುತ ಅವಶ್ಯಕವಾಗಿವೆ ಎಂದು ಗಣಜಲಖೇಡ್ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜ್ ಕುಂಬಾರ ಹೇಳಿದರು.
ಕಲಬುರಗಿ ನಗರದ ಖಾದ್ರಿ ಚೌಕ್ ಸಮೀಪವಿರುವ ಕೊಹಿನೂರ ಶಿಕ್ಷಣ ಸಂಸ್ಥೆಯಲ್ಲಿ ಗೆಳೆಯರ ಬಳಗದ ವತಿಯಿಂದ ಸರಳವಾಗಿ ಜರುಗಿದ ಕ.ರಾ.ಪ್ರಾ.ಶಾ.ಶಿ.ಸಂಘದ ಆಳಂದ ತಾಲೂಕಾ ಘಟಕದ ನೂತನ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮತ್ತು ಕಲಬುರಗಿ ಉತ್ತರ ವಲಯ ಕಸಾಪ ನೂತನ ಅಧ್ಯಕ್ಷ ಪ್ರಭುಲಿಂಗ ಮೂಲಗೆ ಅವರಿಗೆ ಸನ್ಮಾನದಲ್ಲಿ ಅವರು ಮಾತನಾಡುತ್ತಿದ್ದರು.
ಮಹಾಗಾಂವ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾಂತ ಬಿರಾದಾರ ಮಾತನಾಡಿ, ಉಭಯ ವ್ಯಕ್ತಿಗಳು ಉತ್ತಮ ಸಂಘಟಕರು. ಅವರಿಗೆ ದೊರೆತ ಹುದ್ದೆ ಅತ್ಯಂತ ಸೂಕ್ತವಾಗಿದೆ. ಅವರ ಸೇವೆ ಸಮಾಜ, ಕನ್ನಡ ನಾಡು-ನುಡಿ ಮತ್ತು ಶಿಕ್ಷಕರಿಗೆ ದೊರೆಯುತ್ತದೆ. ಅದನ್ನು ಸದುಪಯೋಗಮಾಡಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಸಾಪ ಉತ್ತರ ವಲಯ ನೂತನ ಅಧ್ಯಕ್ಷ ಪ್ರಭುಲಿಂಗ ಮೂಲಗೆ ಮಾತನಾಡಿ, ನಮ್ಮ ಉತ್ತರ ವಲಯದಲ್ಲಿ ಕನ್ನಡ ಮಾಧ್ಯಮಗಳ ಶಾಲೆಗಳ ಜೊತೆಗೆ ಇಂಗ್ಲಿಷ್ ಮತ್ತು ಉರ್ದು ಮಾಧ್ಯಮಗಳ ಶಾಲೆಗಳ ಸಂಖ್ಯೆ ಕೂಡಾ ಹೆಚ್ಚಾಗಿದೆ. ಪ್ರತಿ ಶನಿವಾರ ಒಂದು ಶಾಲೆಯಲ್ಲಿ ನಮ್ಮ ಕಸಾಪ ವತಿಯಿಂದ ಕನ್ನಡಪರ ಕಾರ್ಯಕ್ರಮ ಹಮ್ಮಿಕೊಂಡು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ನಮ್ಮದಾಗಿದೆ ಎಂದು ನುಡಿದರು.
ಕ.ರಾ.ಪ್ರಾ.ಶಾ.ಶಿ.ಸಂಘದ ಆಳಂದ ತಾಲೂಕಾ ಘಟಕದ ನೂತನ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ೧೫೦೦ ಜನ ಪ್ರಾಥಮಿಕ ಶಾಲಾ ಶಿಕ್ಷಕರು ಹೊಂದಿರುವ ದೊಡ್ಡ ತಾಲೂಕು ನಮ್ಮದಾಗಿದೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದ ಕೇವಲ ಒಂದೇ ವಾರದಲ್ಲಿ ಶಿಕ್ಷಕರ ಸೇವೆಗೆ ಸಂಬಂಧಿತ ಕೆಲಸಗಳು ತೀರ್ವಗತಿಯಲ್ಲಿ ಆಗಬೇಕು ಎಂಬ ಉದ್ದೇಶದಿಂದ ಬಿಇಓ ಕಚೇರಿಗೆ ೩ ಜನ ಪ್ರ.ದ.ಸ ಮತ್ತು ೪ ಜನ ದ್ವಿ.ದ.ಸ ಸೇರಿದಂತೆ ಒಟ್ಟು ೭ ಜನ ಸಿಬ್ಬಂದಿಯನ್ನು ತಾಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆಗಳಿಂದ ನಿಯೋಜನೆ ಮಾಡುವ, ಶಿಕ್ಷಕರ ಮಾಹಿತಿಗಾಗಿ ಮೋಬೈಲ್ ಆಪ್, ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶಾಸಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡುವುದು ಸೇರಿದಂತೆ ಕೆಲವು ಕಾರ್ಯಗಳನ್ನು ಮಾಡಲಾಗಿದೆ. ಇನ್ನೂ ಮುಂದೆಯೂ ಕೂಡಾ ನಮ್ಮ ಸಂಘ ನಿರಂತರವಾಗಿ ಶ್ರಮಿಸುತ್ತದೆ ಎಂದರು.
ಎಚ್.ಬಿ.ಪಾಟೀಲ, ಚಂದ್ರಶೇಖರ ಪಾಟೀಲ, ರಾಜಕುಮಾರ ಬಟಗೇರಿ, ಅಣ್ಣಾರಾಯ ಎಚ್.ಮಂಗಾಣೆ, ಸಂಜೀವಕುಮಾರ ಪಾಟೀಲ, ಶಿವಯೋಗಪ್ಪ ಬಿರಾದಾರ, ಮಹಾದೇವಪ್ಪ ಪಾಟೀಲ, ಅಣ್ಣಾರಾಯ ಬಿರಾದಾರ, ವಿಠಲ ಶಾಬಾಯಿ, ಪ್ರಕಾಶ ಸರಸಂಬಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.