ಜಿಲ್ಲೆಯಾದ್ಯಂತ ಸಂಕ್ರಾಂತಿಯ ಸರಳ ಆಚರಣೆ

0
11

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಜನರು ಸಂಕ್ರಾಂತಿ ಹಬ್ಬವನ್ನು ಕೋವಿಡ್ ಆತಂಕದ ಕಾರಣದಿಂದ ಸರಳವಾಗಿ ಆಚರಿಸಿದರು.

ಈ ಹಬ್ಬದ ಸಂದರ್ಭದಲ್ಲಿ ನದಿಗಳಲ್ಲಿ ಪುಣ್ಯಸ್ನಾನ ಮಾಡಿ, ಕುಟುಂಬದವರು-ಬಂಧು-ಮಿತ್ರರೊಂದಿಗೆ ಸೇರಿ ಊಟ ಮಾಡುವುದು ಸಂಪ್ರದಾಯ. ಆದರೆ, ಈ ಬಾರಿ ಕೋವಿಡ್ ಕಾರಣದಿಂದ ನದಿಗಳಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ಇರಲಿಲ್ಲ. ಆದರೂ ಕೆಲವರು ಅಲ್ಲಲ್ಲಿ ಪೊಲೀಸರ ಕಣ್ತಪ್ಪಿಸಿ ಪುಣ್ಯಸ್ನಾನ ಮಾಡಿ ಸಂಪ್ರದಾಯ ಪಾಲಿಸಿದರು. ಇದರಿಂದಾಗಿ ಬಹುತೇಕ ಕಡೆಗಳಲ್ಲಿ ಹಬ್ಬವು ಮನೆಗಳಿಗೆ ಸೀಮಿತವಾಯಿತು.

Contact Your\'s Advertisement; 9902492681

ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ರೊಟ್ಟಿಊಟವನ್ನು ನೆರೆ ಮನೆಯವರು ಹಾಗೂ ಬಂಧುಗಳಿಗೆ ಹಂಚುವ ‘ಭೋಗಿ’ ಕಾರ್ಯಕ್ರಮ ಗುರುವಾರದಿಂದಲೇ ಆರಂಭವಾಯಿತು. ಶುಕ್ರವಾರವೂ ಕೆಲವರು ಸೊಪ್ಪು ಮತ್ತು ವಿವಿಧ ಕಾಳುಗಳಿಂದ ತಯಾರಿಸಿದ ಹಲವು ಪಲ್ಯಗಳನ್ನು ಒಳಗೊಂಡಿರುವ ವಿವಿಧ ರೊಟ್ಟಿಗಳ ಊಟವನ್ನು ಮನೆಗಳಿಗೆ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಶನಿವಾರವೂ ಹಬ್ಬದಾಚರಣೆ ಮುಂದುವರಿಯಲಿದೆ. ಎಳ್ಳು-ಬೆಲ್ಲ ಹಂಚುವ ಕಾರ್ಯಕ್ರಮ ನಡೆಯಲಿದೆ.

ನಗರದ ಚವಾಟ ಗಲ್ಲಿ ಸೇರಿದಂತೆ ಅಲ್ಲಲ್ಲಿ ಗವಳಿ ಸಮಾಜದವರು ಎಮ್ಮೆಗಳನ್ನು ಓಡಿಸುವ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಭ್ರಮಿಸಿದರು.

ನಗರದ ಅಲ್ಲಲ್ಲಿ ಮಕ್ಕಳು ಶುಕ್ರವಾರವೇ ನೆರೆ ಹೊರೆಯವರಿಗೆ ಎಳ್ಳು-ಬೆಲ್ಲವನ್ನು ನೀಡಿ, ‘ಸಿಹಿ ತಗೊಳ್ಳಿ, ಸಿಹಿಯಾಗಿರಿ ಹಾಗೂ ಸಿಹಿಯಾದ ಮಾತನಾಡಿ’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವರು, ಕುಟುಂಬ ಸಮೇತ ನದಿಗಳ ದಡಗಳಿಗೆ, ಜಮೀನುಗಳಿಗೆ ಅಥವಾ ಹೊರವಲಯದ ಪ್ರದೇಶಗಳಿಗೆ ತೆರಳಿ ರೊಟ್ಟಿಊಟ ಸವಿದರು.

ನದಿಗಳ ದಡದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ನಿರ್ಬಂಧಿಸಿದ್ದರಿಂದ, ಹಲವರು ತಾಲ್ಲೂಕಿನ ಭೂತರಾಮಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಬಂದಿದ್ದರು. ಹೀಗಾಗಿ, ಅಲ್ಲಿ ಜನಜಂಗುಳಿ ಕಂಡುಬಂತು. ಕುಟುಂಬದವರು ಹಾಗೂ ಮಿತ್ರರೊಂದಿಗೆ ಬಂದಿದ್ದ ಹಲವರು, ಅಲ್ಲೇ ಸಾಮೂಹಿಕವಾಗಿ ಭೋಜನ ಸವಿದರು. ಮಕ್ಕಳು ಆಟವಾಡಿ ಸಂಭ್ರಮಿಸಿದರು.

ನಿರ್ಬಂಧದ ನಡುವೆಯೂ ರಾಯಬಾಗ ತಾಲ್ಲೂಕಿನ ಮುಗಳಖೋಡದಲ್ಲಿ ಯಲ್ಲಮ್ಮ ದೇವಿ ಜಾತ್ರೆ ನಡೆದಿದೆ. ಅಲ್ಲಿ ನೂರಾರು ಮಂದಿ ಸೇರಿದ್ದರು. ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮೊದಲಾದ ಕೋವಿಡ್ ಮಾರ್ಗಸೂಚಿ ಪಾಲನೆಯಾಗಲಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here