ಬೆಳಗಾವಿ: ಕೋವಿಡ್ ಅಲೆ ಉತ್ತುಂಗಕ್ಕೆ ಏರಿ ವೈದ್ಯಕೀಯ ಅಮ್ಲಜನಕಕ್ಕೆ ಬೇಡಿಕೆ ಹೆಚ್ಚಿದಲ್ಲಿ, ಪೂರೈಕೆಗೆ ಜಿಲ್ಲಾಡಳಿತವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪೂರ್ವ ತಯಾರಿ ಮಾಡಿಕೊಂಡಿದೆ. ಲಭ್ಯವಿರುವ ಹಾಸಿಗೆಗಳಿಗೆ ತಕ್ಕಂತೆ ಆಮ್ಲಜನಕ ಸರಬರಾಜಿಗೆ ಕ್ರಮ ವಹಿಸಲಾಗಿದೆ.
ಸದ್ಯಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಸಂಗ್ರಹಕ್ಕಾಗಿ ಘಟಕಗಳನ್ನು ಅಳವಡಿಸಲಾಗಿದೆ. ಕೋವಿಡ್ ಸೋಂಕಿತರಿಗಾಗಿ ಜಿಲ್ಲಾಸ್ಪತ್ರೆಯಲ್ಲಿ 680 ಆಮ್ಲಜನಕ ಪೂರೈಕೆ ವ್ಯವಸ್ಥೆಯುಳ್ಳ ಹಾಸಿಗೆ, 65 ವೆಂಟಿಲೇಟರ್ ಹಾಸಿಗೆ ಹಾಗೂ ಐಸಿಯು ಘಟಕದಲ್ಲಿ 90 ಹಾಸಿಗೆಗಳನ್ನು ಮೀಸಲಿಡಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 50 ಹಾಗೂ 16 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 ಆಮ್ಲಜನಕ ಹಾಸಿಗೆಗಳಿವೆ. 152 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 2 ಆಮ್ಲಜನಕ ಸಾಂದ್ರಕಗಳಿವೆ. ಜಿಲ್ಲಾಸ್ಪತ್ರೆಯಲ್ಲಿ 3 ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 7 ಆಮ್ಲಜನಕ ಉತ್ಪಾದನಾ ಘಟಕಗಳಿವೆ. ತುರ್ತು ಬಳಕೆಗೆ ತೊಂದರೆ ಇಲ್ಲದಂತೆ ಕ್ರಮ ವಹಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಅವಲಂಬನೆ ತಪ್ಪಿಲ್ಲ: ಲಿಕ್ವಿಡ್ ರೂಪದ ವೈದ್ಯಕೀಯ ಆಮ್ಲಜನಕಕ್ಕಾಗಿ ಬೇರೆ ಜಿಲ್ಲೆಗಳ ಮೇಲೆ ಅವಲಂಬನೆ ಆಗುವುದು ತಪ್ಪಿಲ್ಲ. ಅಂದಾಜಿನ ಪ್ರಕಾರ, ಸದ್ಯಕ್ಕೆ ನಿತ್ಯ 10 ಕೆ.ಎಲ್. ಲಿಕ್ವಿಡ್ ವೈದ್ಯಕೀಯ ಆಮ್ಲಜನಕ ಬೇಕಾಗುತ್ತದೆ. ಅದಕ್ಕಾಗಿ ಹೊಸಪೇಟೆ ಹಾಗೂ ಮಹಾರಾಷ್ಟ್ರವನ್ನು ಅವಲಂಬಿಸಲಾಗಿದೆ. ಸ್ವಂತವಾಗಿ ನಿತ್ಯ 1,799 ಜಂಬೊ ಸಿಲಿಂಡರ್‌ಗಳನ್ನು ಮರುಪೂರಣ ಮಾಡಬಹುದಾದ ಸಾಮರ್ಥ್ಯದ ಘಟಕಗಳಿವೆ.
ಜಿಲ್ಲಾಸ್ಪತ್ರೆಯಲ್ಲಿ 3 ಆಮ್ಲಜನಕ ಉತ್ಪಾದನೆ/ ಸಂಗ್ರಹಿಸಿ ಪೂರೈಸುವ ಘಟಕಗಳಿವೆ. ಅವುಗಳಿಂದ ನಿತ್ಯ 600 ಹಾಸಿಗೆಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ವ್ಯವಸ್ಥೆ ಇದೆ. ಅಥಣಿ, ರಾಯಬಾಗ, ಚಿಕ್ಕೋಡಿ, ಬೈಲಹೊಂಗಲ ಮತ್ತು ಗೋಕಾಕ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 50 ಹಾಸಿಗೆಗಳಿಗೆ ನಿರಂತರವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಬಹುದಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮರುಪೂರಣದಾರರಿದ್ದಾರೆ: ಲಿಕ್ವಿಡ್ ಆಮ್ಲಜನಕವನ್ನು ಐಸಿಯುಗಳಿಗೆ ನೇರವಾಗಿ ಬಳಸಲಾಗುತ್ತದೆ. ಆ ರೀತಿಯ ಘಟಕವು ಬಿಮ್ಸ್‌ನಲ್ಲಿ (13 ಕೆ.ಎಲ್. ಸಾಮರ್ಥ್ಯ)ದೆ. ಖಾಸಗಿ ಕೆಎಲ್‌ಇ ಆಸ್ಪತ್ರೆಯಲ್ಲಿ 18 ಕೆ.ಎಲ್. ಸಾಮರ್ಥ್ಯದ ಘಟಕವಿದೆ.
ಬೆಳಗಾವಿಯ ಎಂಎಸ್‌ಪಿಎಲ್, ಬೆಳಗಾಂ ಆಕ್ಸಿಜನ್ ಮತ್ತು ನಿಪ್ಪಾಣಿಯ ಬ್ರಹ್ಮನಾಥ ಗ್ಯಾಸ್ ಏಜೆನ್ಸಿಯವರು ಪ್ರಮುಖ ಮರುಪೂರಣದಾರ(ರಿಫಿಲ್ಲರ್)ರಾಗಿದ್ದಾರೆ. ಅವರು ಮಹಾರಾಷ್ಟ್ರದ ಪುಣೆ, ಕೊಲ್ಹಾಪುರ ಮತ್ತು ರಾಜ್ಯದ ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಂಪನಿಗಳಿಂದ ಪಡೆಯಲು ಒಪ್ಪಂದ ಮಾಡಿಕೊಂಡಿದ್ದಾರೆ. ಸದ್ಯ ಅವರಿಗೆ ಪೂರೈಕೆಯಲ್ಲಿ ತೊಂದರೆಯಾಗಿಲ್ಲ.
ಎಂಎಸ್‌ಪಿಎಲ್‌ನಲ್ಲಿ ಜಂಬೊ ಸಿಲಿಂಡರ್ ಪೂರೈಕೆಯೂ ಇದೆ ಮತ್ತು ಲಿಕ್ವಿಡ್ ಆಮ್ಲಜನಕ ಘಟಕವೂ ಇದೆ. ಒಟ್ಟಾರೆ ಖಾಸಗಿಯವರ ಬಳಿ 46 ಕಿ.ಲೋ. ಲಿಕ್ವಿಡ್ ಆಮ್ಲಜನಕ ಸಂಗ್ರಹ ಸಾಮರ್ಥ್ಯದ ಘಟಕಗಳಿವೆ.
ತೊಂದರೆ ಆಗದಂತೆ ನೋಡಿಕೊಳ್ಳಲು: ‘ಬೇಡಿಕೆಗೆ ತಕ್ಕಂತೆ ಆಮ್ಲಜನಕ ಪೂರೈಕೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಗ್ರಹ ಸಾಮರ್ಥ್ಯವಿದೆ ಮತ್ತು ಮರುಪೂರಣದಾರರೂ ಇದ್ದಾರೆ. ಪೂರ್ವಭ್ಯಾಸವನ್ನೂ ನಡೆಸಲಾಗಿದೆ. ಮುಖ್ಯ ಪೂರೈಕೆದಾರರಿಗೆ ನಿಯಮಿತವಾಗಿ ಸರಬರಾಜಾದರೆ ಜಿಲ್ಲೆಯಲ್ಲಿ ಪೂರೈಕೆಗೆ ತೊಂದರೆ ಉಂಟಾಗುವುದಿಲ್ಲ’ ಎಂದು ಸಹಾಯಕ ಔಷಧ ನಿಯಂತ್ರಕ ರಘುರಾಮ್ ನಿಡವಂದ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಮ್ಸ್‌ನಲ್ಲಿ ಅನಿಲ ರೂಪದಲ್ಲಿ ಪೂರೈಸಬಹುದಾದ ತಲಾ ಸಾವಿರ ಎಲ್‌ಪಿಎಂ (ಲೀಟರ್ ಪರ್ ಮಿನಿಟ್) ಸಾಮರ್ಥ್ಯದ 2 ಘಟಕಗಳಿವೆ. ಇದಲ್ಲದೇ, 700 ಹಾಗೂ 500 ಎಲ್‌ಪಿಎಂನ ಮತ್ತೆರಡು ಘಟಕಗಳಿವೆ. ಆಮ್ಲಜನಕ ಬೇಡಿಕೆ ಇರುವ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಸದ್ಯಕ್ಕೆ ಲಿಕ್ವಿಡ್ ಆಮ್ಲಜನಕದಲ್ಲೇ ನಿರ್ವಹಣೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಅವರು.
ಪ್ರಾಯೋಗಿಕ ಯೋಜನೆಗೆ ಬೆಳಗಾವಿ: ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಪ್ರತಿ ಕೋವಿಡ್ ಆಸ್ಪತ್ರೆಯವರೂ ತಮ್ಮಲ್ಲಿರುವ ಘಟಕದಲ್ಲಿನ ಸಾಮರ್ಥ್ಯಕ್ಕಿಂತ ಹೆಚ್ಚುವರಿಯಾಗಿ ಆಮ್ಲಜನಕ ಬೇಕಿದ್ದಲ್ಲಿ ನಿಗದಿತ ಪೋರ್ಟಲ್‌ನಲ್ಲಿ (ಕೆಪಿಎಂಎ) ಆನ್‌ಲೈನ್‌ನಲ್ಲೇ ಬೇಡಿಕೆ ಸಲ್ಲಿಸುವ ಪ್ರಾಯೋಗಿಕ ಯೋಜನೆ ಜಾರಿಗೊಳಿಲಾಗಿದೆ. ಅದನ್ನು ಜಿಲ್ಲೆಯಲ್ಲಿ ಅನುಷ್ಠಾಗೊಳಿಸಲಾಗಿದೆ.
‘ಆಯಾ ಆಸ್ಪತ್ರೆಯವರು ಯೂಸರ್ ಮತ್ತು ಪಾಸ್‌ವರ್ಡ್ ನೀಡಲಾಗಿದೆ. ಅದರ ಮೂಲಕವೇ ಅವರು ಜಿಲ್ಲೆಯ ಪೂರೈಕೆದಾರರಿಗೆ ತಿಳಿಸಬೇಕಾಗುತ್ತದೆ. ಸಮರ್ಪಕ ನಿರ್ವಹಣೆ ಮತ್ತು ಲೆಕ್ಕ ಹೊಂದುವುದಕ್ಕಾಗಿ ನೋಡಲ್ ಅಧಿಕಾರಿಯಾದ ಮುನೀಶ್ ಮೌದ್ಗಿಲ್ (ರಾಜ್ಯ ವಾರ್ ರೂಂ ಹಾಗೂ ವೈದ್ಯಕೀಯ ಆಮ್ಲಜನಕ ಪೂರೈಕೆ ಮೇಲೆ ನಿಗಾ) ಅವರ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯುತ್ತಿದೆ’ ಎನ್ನುತ್ತಾರೆ ರಘುರಾಂ.
ನೋಡಲ್ ಅಧಿಕಾರಿ ಖಾಸಗಿ ಆಸ್ಪತ್ರೆಗಳ ಅಗತ್ಯತೆ ಆಧರಿಸಿ ಆಮ್ಲಜನಕ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. -ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ.
ಮುಂಜಾಗ್ರತಾ ಕ್ರಮ: ಕೋವಿಡ್ ಅಲೆ ನಿರ್ವಹಿಸಲು ಅಗತ್ಯವಾಗಿರುವ ಆಮ್ಲಜನಕದ ಅಭಾವ ಆಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. – ಡಾ.ಎಸ್.ವಿ. ಮುನ್ಯಾಳ, ಡಿಎಚ್‌ಒ, ಬೆಳಗಾವಿ.