ಆಳಂದ: ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡು ಪ್ರಸ್ತಾಪಿಸಿದ ಮೇಲೆ ರಾಜ್ಯದ ಮುಖ್ಯಮಂತ್ರಿಗಳು ಅದನ್ನು ತ್ವರಿತವಾಗಿ ಮಂಜೂರಾತಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕ್ಷೇತ್ರ ಅಭಿವೃದ್ಧಿಗೆ ವೇಗ ಸಿಕ್ಕಂತಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.
ತಾಲೂಕಿನ ತೀರ್ಥ ಗ್ರಾಮದ ಹಳ್ಳಕ್ಕೆ ಸೇರುವ ಸಾಲೇಗಾಂವ ಮತ್ತು ಚಿತಲಿ ಹಳ್ಳದ ನೀರಿಗೆ ಅಡ್ಡಲಾಗಿ ತೀರ್ಥ ಕೂಡ್ಲ್‌ಮೂಲಿ ಬಳಿ ೨೦೨೧-೨೨ನೇ ಸಾಲಿನ ನಬಾರ್ಡ್ ಯೋಜನೆ ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕೈಗೆತ್ತಿಕೊಂಡ ೧.೪೯ ಕೋಟಿ ವೆಚ್ಚದ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ಹಾಗೂ ಎರಡು ಶಾಲಾ ಕೋಣೆ ಉದ್ಘಾಟನೆ ಕೈಗೊಂಡು ಬಳಿಕ ತೀರ್ಥ ಗ್ರಾಮಸ್ಥರು ಏರ್ಪಡಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೋವಿಡ್,೧೯ ಹಿನ್ನೆಲೆಯಲ್ಲಿ ಕಳೆದ ಸಾಲಿನಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳಿಗೆ ವಿಳಂಬವಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಎಲ್ಲ ಗ್ರಾಮಗಳಿಗೆ ನಿರೀಕ್ಷಿತ ಕಾಮಗಾರಿ ಪಟ್ಟಿಸಲ್ಲಿಸಿದ ಮೇಲೆ ಅನುದಾನ ದೊರೆಯುತ್ತಿದೆ. ಇದರಿಂದ ಎಲ್ಲ ಕಾಮಗಾರಿಗಳು ಕೈಗೆತ್ತಿಕೊಂಡು ಮುಗಿಸಲಾಗುವುದು. ತೀರ್ಥ ಹಳ್ಳಕ್ಕೆ ಕೈಗೊಳ್ಳುವ ಅಣೆಕಟ್ಟೆ ಗುಣಮಟ್ಟದ ಕಾಮಗಾರಿ ಕೈಗೊಂಡು ನೀರು ನಿಂತು ರೈತರಿಗೆ ಅನುಕೂಲ ಕಲ್ಪಿಸುವಂತಾಗಬೇಕು ಎಂದು ತಾಕೀತು ಮಾಡಿದರು.
ಕೃಷಿ ಅಂತರ್ಜಲ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ಮೇಲೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪಿತ ಎಲ್ಲ ಕೆರೆಗಳ ಮಂಜೂರಾತಿ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಗ್ರಾಮದಲ್ಲಿ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಸಾಕಷ್ಟು ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಂಬೇಡ್ಕರ್ ಭವನ, ಸಿಮೆಂಟ ರಸ್ತೆ ಟೆಂಡರ ಹಂತದಲ್ಲಿದ್ದು, ಇನ್ನೂ ಅಗತ್ಯ ಬೇಡಿಕೆ ಕಲ್ಯಾಣ ಮಂಟಪ, ಸಿಮೆಂಟ ರಸ್ತೆ ಹಾಗೂ ಆಳಂದ ತೀರ್ಥ ಸಂಪರ್ಕ ರಸ್ತೆಯನ್ನು ಕೈಗೊಳ್ಳಲಾಗುವುದು. ಅಭಿವೃದ್ಧಿ ಎಷ್ಟೇ ಮಾಡಿದರು ಇನ್ನೂ ಬಾಕಿ ಉಳಿದಿರುತ್ತದೆ. ನಿರಂತರ ಕಾಮಗಾರಿ ಹಾಗೂ ಸಮಗ್ರ ಅಭಿವೃದ್ಧಿಗೆ ಜನರ ಸಹಕಾರ ನೀಡಬೇಕು ಎಂದು ಅವರು ಕೋರಿದರು.
ಬಿಜೆಪಿ ಮುಖಂಡ ಮಲ್ಲಣ್ಣಾ ನಾಗೂರೆ, ನಿರಗುಡಿ ಗ್ರಾಪಂ ಅಧ್ಯಕ್ಷ ಯಶ್ವಂತರಾವ್ ಪಾಟೀಲ, ಗ್ರಾಮದ ಹಿರಿಯ ಮುಖಂಡ ಸಿದ್ಧಣ್ಣಾ ಹಳ್ಳೆ ಅವರು ಮಾತನಾಡಿ, ಶಾಸಕರ ಅಧಿಕಾರದ ಎರಡೂ ಅವಧಿಯಲ್ಲಿ ತೀರ್ಥ ಗ್ರಾಮಕ್ಕೆ ಬ್ರೀಜ್, ೪೦ ರೈತರ ಹೊಲಗಳಿಗೆ ಬದು ನಿರ್ಮಾಣ, ರಸ್ತೆ, ೫೦ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಸಾಕಷ್ಟು ಅನುದಾನ ನೀಡಿ ಕಾಮಗಾರಿಗಳನ್ನು ಕೈಗೊಂಡಿದ್ದು ಗ್ರಾಮಸ್ಥರ ಬೆಂಬಲ ಶಾಸಕರಿಗೆ ಸದಾ ಇರುತ್ತದೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಎಇಇ ಶಾಂತಪ್ಪ ಜಾಧವ ಮಾತನಾಡಿ, ತೀರ್ಥ ಹಳ್ಳಕ್ಕೆ ೧.೪೯ ಕೋಟಿ ಅಣೆಕಟ್ಟೆ ನಿರ್ಮಾಣಕ್ಕೆ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ನಡೆಯಲಿದೆ. ೫೦ ಹೆಕ್ಟೇರ್ ಪ್ರದೇಶಕ್ಕೆ ಅಂತರ್ಜಲ ಅಭಿವೃದ್ಧಿಗೆ ನೀರಾವರಿಗೆ ಅನುಕೂಲವಾಗಲಿದೆ. ರೈತರು ಕಾಮಗಾರಿಗೆ ಸಹಕರಿಸಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಸಕರ ಸಲಹೆ ಮೆರೆಗೆ ತೀರ್ಥ ಸಾಲೇಗಾಂವ ಗ್ರಾಮಕ್ಕೆ ಸ್ಥಳೀಯ ನಾಲಕ್ಕೆ ಬ್ರೀಜ್-ಕಂ ಬ್ಯಾರೇಜ್, ತೀರ್ಥ ನಿಂದ ಮಟಕಿ ರಸ್ತೆಗೆ ಅಡ್ಡಲಾಗಿರುವ ಹಳ್ಳಕ್ಕೆ ಬ್ರೀಜ್-ಕಂ-ಬ್ಯಾರೇಜ್ ಹೀಗೆ ಇನ್ನಿತರ ಹಲವು ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಅಶೋಕ ಗುತ್ತೇದಾರ, ಸಹಕಾರಿ ಧುರೀಣ ಮಹಾಂತಪ್ಪ ಆಲೂರೆ, ಅಪ್ಪಸಾಬ ಗುಂಡೆ, ಶರಣಬಸಪ್ಪ ಬಿರಾದಾರ ಮಟಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಾಬಾಯಿ ಹಕ್ಕಿ, ಗುತ್ತಿಗೆದಾರ ಶಂಕರ ಜಾಧವ್, ಮಲ್ಲಿಕಾರ್ಜುನ ಕಂದಗುಳೆ, ಎಇ ಲಿಂಗರಾಜ ಪೂಜಾರಿ, ಸಮನ್ವಯಾಧಿಕಾರಿ ಬಸವಂತರಾಯ ಜಿಡ್ಡೆ, ಗ್ರಾಮದ ರಾಮಚಂದ್ರ ಪಾರಾಣೆ, ಹಣಮಂತರಾವ್ ಸರಾಟೆ, ಗಂಗಾಧರ್ ಪಾಟೀಲ, ಗ್ರಾಪಂ ಸದಸ್ಯ ಜಗನಾಥ ಬಿರಾದಾರ, ಶಿವರಾಜ ಪೂಜಾರಿ, ಗುಜರಲಾಲ ಪಾಟೀಲ, ವಿಶ್ವನಾಥ ಪೂಜಾರಿ, ಮಂಜು ಬೆಲೂರೆ, ಶ್ರೀಶೈಲ ನಿಂಬಾಳೆ, ಬಸವರಾಜ ಕಾಂಬಳೆ, ಮಲ್ಲು ಪೊಲಾಸೆ, ಭೀಮರಾವ್ ಪಾರಾಣೆ, ಧರ್ಮರಾಯ ಆರ್. ಪಾಟೀಲ, ಶಂಕರ ಪಾಟೀಲ, ರವಿಂದ್ರ ಸಂಜು ಪಾಟೀಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೆರೆ ಹೊರೆಯ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರಿಗೆ ಗ್ರಾಮಸ್ಥರು ಸನ್ಮಾನಿಸಿದರು.