ಬಾಗಲಕೋಟೆ: ಸರ್ಕಾರ ಮತ್ತು ಜಿಲ್ಲಾಡಳಿತದ ನಿಷೇಧದ ನಡುವೆಯೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ದೇವಿ ರಥೋತ್ಸವ ಅದ್ದೂರಿಯಾಗಿ ನೆರವೇರಿದೆ. ಸೋಮವಾರ ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬಂದಿದೆ.
ಭಕ್ತರನ್ನ ನಿಯಂತ್ರಣ ಮಾಡಲು ಪೊಲೀಸರು ಲಾಠಿ ಬೀಸಿರುವ ಪ್ರಸಂಗ ಕೂಡ ನಡೆದಿದೆ. ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಿ ರಥೋತ್ಸವ ಮಾಡಿದ್ದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ರಾಜ್ಯದಲ್ಲಿ ಕೊರೊನಾ ಮತ್ತು ಒಮೈಕ್ರಾನ್ ಆತಂಕದಿಂದ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಹೀಗಾಗಿ ರಾಜ್ಯಾದ್ಯಂತ ಜಾತ್ರೆ, ರಥೋತ್ಸವ ಸೇರಿದಂತೆ ವಿವಿಧ ಸಮಾರಂಭಗಳಿಗೆ ನಿಷೇಧ ಹೇರಿದೆ.
ಬನಶಂಕರಿ ದೇವಸ್ಥಾನದ ಜಾತ್ರೆ ಮತ್ತು ರಥೋತ್ಸವನ್ನ ರದ್ದು ಮಾಡಿ ಜಿಲ್ಲಾಡಳಿತ ಅದೇಶ ಹೊರಡಿಸಿತ್ತು. ಆದ್ರೆ, ಜಿಲ್ಲಾಡಳಿತದ ಆದೇಶವನ್ನೂ ಉಲ್ಲಂಘಿಸಿ ದೇವಸ್ಥಾನದ ಆಡಳಿತ ಮಂಡಳಿ ಸಾಂಕೇತಿಕವಾಗಿ ರಥೋತ್ಸವ ನೆರವೇರಿಸಿತು.
ರಥೋತ್ಸವದಲ್ಲಿ ಭಾಗಿಯಾಗಲು ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದು ಬಂತು. ಕೊನೆ ಗಳಿಗೆಯಲ್ಲಿ ನುಗ್ಗಿ ಬಂದ ಭಕ್ತರನ್ನ ನಿಯಂತ್ರಣ ಮಾಡಲು ಸಾಧ್ಯವಾಗದೆ ಪೊಲೀಸರು ಅಸಹಾಯಕರಾಗಿದ್ದರು..
ಬ್ಯಾರಿಕೇಡ್ ಮುರಿದು ಆವರಣ ಪ್ರವೇಶಿಸಿದ ತೇರು ಎಳೆಯುವ ಹಗ್ಗದ ಬಂಡಿ..! ಪ್ರತೀ ವರ್ಷ ಬಣದ ಹುಣ್ಣಿಮೆ ದಿನದಂದು ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು. ಈ ಬಾರಿ ಜಾತ್ರೆ ರದ್ದು ಮಾಡಿದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣಕ್ಕೆ ಭಕ್ತರಿಗೆ ನಿರ್ಬಂಧ ಹಾಕಲಾಗಿತ್ತು. ಹೀಗಾಗಿ ದೇವಸ್ಥಾನದಿಂದ ಎರಡು ಕಿಲೋಮೀಟರ್ ದೂರದಲ್ಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಭಕ್ತರನ್ನ ತಡೆ ಹಿಡಿದಿದ್ದರು.
ಬಾದಾಮಿ ಬನಶಂಕರಿ ಜಾತ್ರೆ: ಕೊನೆ ಗಳಿಗೆಯಲ್ಲಿ ಸಂಕೇತವಾಗಿ ರಥೋತ್ಸವ ನಡೆಸಲು ನಿರ್ಧರಿಸಿದ ಆಡಳಿತ ಮಂಡಳಿ..!:
ದೇವಸ್ಥಾನದ ಆಡಳಿತ ಮಂಡಳಿ ಕೊನೆ ಗಳಿಗೆಯಲ್ಲಿ ರಥೋತ್ಸವ ನಡೆಸಲು ನಿರ್ಧಾರ ತೆಗೆದುಕೊಂಡಿದ್ದರಿಂದ ನೋಡ ನೋಡುತ್ತಲೇ ದೇವಸ್ಥಾನದ ಆವರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಭಕ್ತರನ್ನು ಹೊರ ಕಳಿಸಲು ಪೊಲೀಸರು ಹರಸಾಹಸ ಪಟ್ಟರು ನಿಯಂತ್ರಣ ಮಾಡಲು ಸಾಧ್ಯವಾಗದೆ ಅಸಹಾಯಕರಾದರು.
ಪದ್ಧತಿಯಂತೆ ರಥದ ಹಗ್ಗ ತಂದ ಗದಗ ಜಿಲ್ಲೆಯ ಮಾಡಲಗೇರಿ ಗ್ರಾಮದ ಭಕ್ತರು ಎತ್ತಿನ ಬಂಡಿ ಸಮೇತ ತೇರಿನ ಆವರಣದೊಳಗೆ ನುಗ್ಗಿದರು. ಬ್ಯಾರಿಕೇಡ್ ತಳ್ಳಿ ಬಂಡಿ ಸಮೇತ ಒಳಬಂದ ಭಕ್ತರನ್ನ ಚದುರಿಸಲು ಪೊಲೀಸರು ಲಾಠಿ ಬೀಸಿದರು.
ಕೊನೆಗೂ ನಿಷೇಧದ ಮಧ್ಯೆಯೂ ಬಾದಾಮಿ ಬನಶಂಕರಿ ದೇವಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಭಕ್ತರು ಮಾಸ್ಕ್ ಸಾಮಾಜಿಕ ಅಂತರ ಮರೆತಿದ್ದರು.
ಜಾತ್ರೆ ನಡೆಸಿದವರ ವಿರುದ್ಧ FIR ದಾಖಲು..! —
ನಿಯಮಗಳನ್ನು ಮೀರಿ ರಥೋತ್ಸವ ನಡೆಸಿದ ಹಿನ್ನೆಲೆಯಲ್ಲಿ ಬಾದಾಮಿ ಪೋಲಿಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಮತ್ತು ಮೆರವಣಿಗೆ ಮೂಲಕ ಬಂದಿದ್ದ ಮಾಡಲಗೇರಿ ಗ್ರಾಮಸ್ಥರ ವಿರುದ್ಧ ದೂರು ದಾಖಲು ಮಾಡಲಾಗಿದ್ದು ಎಸ್ಪಿ ಲೋಕೇಶ್ ಜಗಲಾಸರ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜ.25ರ ವೇಳೆ ಕೊರೊನಾ 3ನೇ ಅಲೆ ತೀವ್ರ:
ಜನವರಿ 25ರ ವೇಳೆಗೆ ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ತೀವ್ರಗೊಳ್ಳಲಿದೆ. ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿದಂತೆ ಕೋವಿಡ್ ನಿಯಮಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಶುಕ್ರವಾರದವರೆಗೆ (ಜ.21) ಕಾದು ನೋಡುವ ತಂತ್ರ ಅನುಸರಿಸುತ್ತೇವೆ. ಅಲ್ಲಿಯವರೆಗೆ ಎಲ್ಲವೂ ಯಥಾಸ್ಥಿತಿಯಲ್ಲಿರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.