ಚಿಟಗುಪ್ಪ: ತಾಲ್ಲೂಕಿನ ನಿರ್ಣಾದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಆದರೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.
1992ನೇ ಸಾಲಿನಲ್ಲಿ ಆರಂಭವಾದ ಕಾಲೇಜು ಸರ್ಕಾರಿ ಪ್ರೌಢಶಾಲೆಯ ಕಟ್ಟಡದಲ್ಲಿಯೇ ಇಷ್ಟು ವರ್ಷ ನಡೆಯುತ್ತಿತ್ತು. ಶಾಸಕ ಬಂಡೆಪ್ಪ ಕಾಶೆಂಪುರ ಅವರ ಕಾಳಜಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹60 ಲಕ್ಷ ಅನುದಾನದಲ್ಲಿ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲಾಗಿದೆ.
ಕಾಲೇಜಿನಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಸದ್ಯ ಕಲಾ ವಿಭಾಗ ಮಾತ್ರ ಇದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಾಣಿಜ್ಯ ವಿಭಾಗ ಆರಂಭಿಸಲಾಗುವುದು ಎಂದು ಪ್ರಾಚಾರ್ಯ ಶಿವರಾಜ್ ಬಿರಾದಾರ್ ತಿಳಿಸಿದರು.
ಕಾಲೇಜಿಗೆ ಕಟ್ಟಡ ಒದಗಿಸಿದ್ದರೂ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ನೀರಿಗಾಗಿ ವಿದ್ಯಾರ್ಥಿಗಳು ನಿತ್ಯ ಸಂಕಟ ಪಡುವಂತಾಗಿದೆ. ದೂರದಿಂದ ಕೊಡದಲ್ಲಿ ನೀರು ತುಂಬಿಕೊಂಡು ಬಂದು ಕುಡಿಯಬೇಕಾದ ಪರಿಸ್ಥಿತಿ ಇದ್ದು, ಕಾಲೇಜು ಆವರಣದಲ್ಲಿಯೇ ಕೊಳವೆಬಾವಿ ಕೊರೆಸುವ ಕಾರ್ಯ ಆಗಬೇಕು ಎಂದು ಉಪನ್ಯಾಸಕ ಓಂಕಾರ ರಡ್ಡಿ ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳ ಜ್ಞಾನ ದಾಹ ತಣಿಸಲು ಗ್ರಂಥಾಲಯ ಅವಶ್ಯಕತೆ ಇದೆ. ಆವರಣದಲ್ಲಿಯೇ ಪ್ರೌಢಶಾಲೆಗಾಗಿ ನಿರ್ಮಿಸಲಾದ ಎರಡು ಸುಸಜ್ಜಿತ ಕೊಠಡಿಗಳು ಖಾಲಿ ಉಳಿದಿವೆ. ಅವುಗಳಲ್ಲಿ ಗ್ರಂಥಾಲಯ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಉಪನ್ಯಾಸಕ ಗಿರಿಧರ ರಡ್ಡಿ .
ಕಾಯಂ ಹಾಗೂ ಅತಿಥಿ ಉಪನ್ಯಾಸಕರು ಬೋಧನೆ ಮಾಡುತ್ತಿದ್ದು, ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಹುದ್ದೆ, ಭದ್ರತಾ ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಉಪನ್ಯಾಸಕ ಚಂದ್ರಕಾಂತ ಥೋರೆ ಒತ್ತಾಯಿಸುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ: ಪಿಯು ಕಲಾ ವಿಭಾಗದಲ್ಲಿ ಪ್ರಥಮ ವರ್ಷದ 85, ದ್ವಿತೀಯ ವರ್ಷದ 43 ಸೇರಿದಂತೆ ಒಟ್ಟು 128 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ನಿರ್ಣಾದಲ್ಲಿ ಪಿಯು ಕಾಲೇಜು ಕಟ್ಟಡ ನಿರ್ಮಿಸಲಾಗಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಬಂಡೆಪ್ಪ ಕಾಶೆಂಪುರ, ಶಾಸಕ
ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ಕೊರತೆಯಿಂದ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತಿದೆ. ಕೂಡಲೇ ದೈಹಿಕ ಶಿಕ್ಷಣ ಉಪನ್ಯಾಸಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ರಾಜಕುಮಾರ್ ಕಲಾಲ್, ಪಾಲಕ, ನಿರ್ಣಾ