ಕಲಬುರಗಿ: ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವದೆ ಶ್ರೇಷ್ಠ, ತುಳಿದು ಬದುಕಿರುವವರು ಬಹುಬೇಗ ಅಳಿಯುತ್ತಾರೆ, ಆದ್ರೆ ತಿಳಿದು ಬದುಕಿರುವವರು ಅಳಿದ ಮೇಲೂ ಉಳಿಯುತ್ತಾರೆ ಈ ಸಾಲಿಗೆ ಸೇರಿದ ಆಧುನಿಕ ಮಹಾಸಂತ ತುಮಕೂರಿನ ಸಿದ್ಧಗಂಗಾ ಶಿವಕುಮಾರ ಮಹಾಸ್ವಾಮಿಗಳು ಎಂದು ಹೋರಾಟಗಾರ ಪ್ರಭುದೇವ ಯಳಸಂಗಿ ಹೇಳಿದರು.
ಇ೦ದು ಕಲಬುರಗಿ ನಗರದ ಆಳಂದ ರಸ್ತೆಯ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘವು ಹಮ್ಮಿಕೊಂಡಿರುವ ತುಮಕೂರ ದಿ. ಡಾ. ಶಿವಕುಮಾರ ಮಹಾಸ್ವಾಮಿಗಳ ಸ್ಮರಣೋತ್ಸವದ ಮುನ್ನಾ ದಿನದ ಕಾರ್ಯಕ್ರಮದ ನಿಮಿತ್ಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಕಾಯಕ ಜೀವಿಗಳಿಗೆ ಗೌರವ ಸನ್ಮಾನಿಸಿ ಮಾತನಾಡುತ್ತಾ ಸಂಘವು ಎಲೆಮರೆ ಕಾಯಿಯಂತೆ ಸೇವೆ ಗೈಯುತ್ತಿರುವವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ.ಈ ಭಾಗದ ಸಾಹಿತಿಗಳು, ಲೇಖಕರು, ಕಲಾವಿದರನ್ನು ರಾಜ್ಯಮಟ್ಟಕ್ಕೆ ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಮಾತನಾಡುತ್ತಾ ಜಾತಿ, ಮತ, ಪಂಥ, ಮೀರಿ ಬೆಳೆದು ಸಮಸಮಾಜ ನಿರ್ಮಾಣ ಮಾಡಲು ಪೂಜ್ಯರ ಪರಿಶ್ರಮ ಅಪಾರ ಇಂದಿನ ವಿದ್ಯಾರ್ಥಿ ಯುವಕರಿಗೆ ಇ೦ತಹ ಮಹಾನ ವ್ಯಕ್ತಿಗಳೆ ಆದರ್ಶವಾಗಬೇಕೆಂದು ಹೇಳಿದರು.ವೇದಿಕೆ ಮೇಲೆ ರಘುನಂದನ ಕುಲಕರ್ಣಿ, ಮಲಕಾರಿ ಪೂಜಾರಿ, ಲಕ್ಷ್ಮೀ ಧಾಕಲಿ, ಕಲ್ಯಾಣಿ ತುಕ್ಕಾಣಿ, ಜನಪದ ಕಲಾವಿದ ರಾಜು ಹೆಬ್ಬಾಳ, ಇತರರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಗೈಯುತ್ತಿರುವ ಕೇದಾರನಾಥ ಎಸ್. ಕುಲಕರ್ಣಿ, ರವಿಕುಮಾರ ಶಹಾಪುರಕರ, ಪಾಂಡುರಂಗ ಕಟಕೆ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸುಲ್ತಾನಾ ಯಾದಗೀರ, ರ೦ಜಿತಾ ಶ್ರೀಚಂದ, ಅಶ್ವಿನಿ ಆಚಾರ್ಯ,ತ್ರಿವೇಣಿ ಸೇರಿದಂತೆ ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.