ಬೆಂಗಳೂರು: ‘ಜನಸಾಮಾನ್ಯರ ಆದಾಯ ಖಾತರಿ ಮತ್ತು ಹೆಚ್ಚಳಕ್ಕೆ ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ. ಅವರಿಗೆ ಆದಾಯ ಬಂದ ಮೇಲೆ ವಿದ್ಯುತ್ ದರ ಏರಿಕೆ ಮಾಡಲಿ. ಈಗ ಲಾಕ್ ಡೌನ್, ಸೀಲ್ ಡೌನ್ ನಿರ್ಬಂಧ ಹೇರಿದ್ದಾರೆ. ಸೋಂಕು ಪ್ರಮಾಣ ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿದ್ದವರು, ಸೋಂಕು ಪ್ರಮಾಣ ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ. ರಾಜಕೀಯ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಸವರು, ಹಾಲಿನ ದರ, ವಿದ್ಯುತ್ ದರ ಹೆಚ್ಚಿಸುತ್ತಿದ್ದಾರೆ. ರೈತನಿಗೆ ತೊಂದರೆ ಆದಾಗ ಅವನ ರಕ್ಷಣೆಗೆ ಸರ್ಕಾರ ಯಾಕೆ ನಿಲ್ಲಲಿಲ್ಲ? ಬೆಳೆ ದರ ಏಕೆ ಹೆಚ್ಚಿಸಲಿಲ್ಲ? ಬೆಂಬಲ ಬೆಲೆ ಯಾಕೆ ನೀಡಲಿಲ್ಲ. ಏರಿಕೆಯಾಗಿರುವ ಕಬ್ಬಿಣ, ಸೀಮೆಂಟ್ ದರ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿಲ್ಲ. ಈಗ ವಿದ್ಯುತ್ ದರ ಬಾಕಿ ಕೊಡಬೇಕು ಎನ್ನುತ್ತಿದ್ದಾರೆ. ವಿದ್ಯುತ್ ಕಂಪನಿಗಳ ಪರಿಸ್ಥಿತಿ ಹೇಗಿದೆ ಎಂದು ನಮಗೆ ಗೊತ್ತಿದೆ. ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು ಎಂದರು.
ವೀಕೆಂಡ್ ಕರ್ಫ್ಯೂವನ್ನು ಸರ್ಕಾರ ಹಿಂಪಡೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಈ ಹಿಂದೆಯೇ ಹೇಳಿದ್ದೆ. ಇದು ಬಿಜೆಪಿ ಕರ್ಫ್ಯೂ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆ ಎಂದು. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು. ಇದರಿಂದ ಜನರಿಗೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗಿದೆ. ಹಣ್ಣು, ತರಕಾರಿ ಬೆಳೆಯುವವರ, ಮಾರುವವರ ಪರಿಸ್ಥಿತಿ ಏನಾಗಿದೆ ಎಂದು ನೀವೇ ನೋಡಿದ್ದೀರಿ. ಕೆಎಸ್ಆರ್ಟಿಸಿ, ಮೆಟ್ರೋದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು, ವಿಮಾನಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು. ಬಡವರು, ಹೊಟೇಲ್ ನವರು, ಚಿತ್ರಮಂದಿರಗಳವರು ಹಾಗೂ ಇತರರು ಶೇ.50 ರಷ್ಟು ಮಾತ್ರ ವ್ಯಾಪಾರ ಮಾಡಬೇಕಂತೆ. ಕುಟುಂಬ ಸದಸ್ಯರು ವಾಹನಗಳಲ್ಲಿ ಸಂಚಾರ ಮಾಡುವಾಗ ಶೇ.50 ರಷ್ಟು ನಿಯಮ ಪಾಲನೆ ಮಾಡಲು ಸಾಧ್ಯವೇ? ಸರ್ಕಾರ ಪ್ರಾಯೋಗಿಕವಾಗಿ ಯೋಚಿಸಬೇಕು. ಈ ಸರ್ಕಾರ ಆ ರೀತಿ ಯೋಚಿಸುತ್ತಿಲ್ಲ ಎಂದು ಹೇಳಿದರು.
ಔಷಧಿ ನೀಡಿ, ಸಹಾಯ ಮಾಡಿ, ಆರೋಗ್ಯ ಕಾಪಾಡಿ ಸರ್ಕಾರ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದರೆ ಈ ಸರ್ಕಾರ ಅವೈಜ್ಞಾನಿಕವಾಗಿ ನಿಯಮಗಳನ್ನು ಜಾರಿ ಮಾಡುತ್ತಿದೆ. ಸರ್ಕಾರಗಳು ರಾಜ್ಯ ಹಾಗೂ ದೇಶದ ಆರ್ಥಿಕತೆ ನೋಡಬೇಕು. ಆಂಧ್ರ, ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮ ಇಲ್ಲಿ ಯಾಕೆ ಎಂದು ಪ್ರಶ್ನಿಸಿದರು.
‘ನಾವು ಆನ್ಲೈನ್ ಹಾಗೂ ಆಫ್ಲೈನ್ ಸದಸ್ಯತ್ವ ನೋಂದಣಿ ಮಾಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಆನ್ಲೈನ್ ಸದಸ್ಯತ್ವ ಅವಕಾಶ ನೀಡಲಾಗಿದೆ. ಮಾರ್ಚ್ ವರೆಗೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ನಂತರವೂ ಸದಸ್ಯತ್ವ ನೀಡುತ್ತೇವೆ. ಆದರೆ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಮತದಾನದ ಹಕ್ಕು ಪಡೆಯಬೇಕಾದರೆ ಈ ಅಭಿಯಾನದ ಕಾಲವಧಿಯಲ್ಲಿಯೇ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿ ಬೂತ್ ಗೆ ಇಬ್ಬರು ಕಾರ್ಯಕರ್ತರ ನೇಮಕಕ್ಕೆ ಸೂಚನೆ ನೀಡಲಾಗಿದೆ. ಆನ್ಲೈನ್ ಸದಸ್ಯತ್ವ ಹೇಗೆ ಮಾಡಬೇಕು ಎಂಬುದಕ್ಕೆ ಈಗ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದರು.