ಶಹಾಬಾದ:ದೇಶಕ್ಕಾಗಿಯೇ ತನ್ನ ಬದುಕನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ಮಲ್ಕಣ್ಣ ಮುದ್ದಾ ಹೇಳಿದರು.
ಅವರು ಬುಧವಾರ ನಗರದ ಕನಕ ವೃತ್ತದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಆಯೋಜಿಸಲಾದ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ರಾಯಣ್ಣ ಹೆಸರು ಕೇಳಿದರೆ ದೇಶದ ಪ್ರತಿಯೊಬ್ಬ ಯುವಕರ ದೇಹದಲ್ಲಿ ವಿದ್ಯುತ್ ಸಂಚಲನವಾಗುತ್ತದೆ.ಕಾರಣ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದರು.ಬ್ರಿಟಿಷರ ತೆರಿಗೆ ಪದ್ಧತಿಯನ್ನು ವಿರೋಧಿಸಿ ೧೮೫೭ರ ಕ್ರಾಂತಿಗಿಂತ ಮುಂಚೆ ಇಡೀ ದೇಶದಲ್ಲಿ ಸ್ವಾತಂತ್ರ್ಯಗೋಸ್ಕರ್ ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತ ಪ್ರಪ್ರಥಮ ಕನ್ನಡಿಗ ಸೇನಾನಿ ಸಂಗೊಳ್ಳಿ ರಾಯಣ್ಣ.ಅಂದು ಹಣದ ಆಸೆಗಾಗಿ, ಭೂಮಿಯ ಆಸೆಗಾಗಿ ರಾಯಣ್ಣನಿಗೆ ನಮ್ಮವರೇ ಮೋಸ ಮಾಡಿ ಬ್ರಿಟಿಷರಿಗೆ ಹಿಡಿದುಕೊಟ್ಟಿರಬಹುದು. ಆದರೆ ತಾಯಿ ಭಾರತ ಮಾತೆ ರಾಯಣ್ಣನಿಗೆ ಮೋಸ ಮಾಡಲಿಲ್ಲ.
ಏಕೆಂದರೆ ರಾಯಣ್ಣ ಹುಟ್ಟಿದ್ದು ಆಗಸ್ಟ ೧೫ರಂದು ಅಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ.ರಾಯಣ್ಣನನ್ನು ಬ್ರಿಟಿಷರು ನೇಣಿಗೇರಿಸಿದ್ದು ಜನೇವರಿ ೨೬ ರಂದು ಅಂದು ನಮ್ಮ ರಾಷ್ಟ್ರ ಗಣರಾಜ್ಯವಾದ ದಿನ. ರಾಯಣ್ಣ ಧೈರ್ಯ, ಸಾಹಸ, ದೇಶಭಕ್ತಿಯ ಮೂಲಕ ಬ್ರಿಟಿಷರ ಎದೆ ನಡುಗಿಸಿದ್ದ ವೀರ.ಕಿತ್ತೂರು ರಾಣಿ ಚೆನ್ನಮ್ಮರ ಬೆನ್ನೆಲುಬಾಗಿ ತಾಯ್ನಾಡಿಗಾಗಿ ಜೀವ ನೀಡಿದ ಅಪ್ರತಿಮ ದೇಶ ಭಕ್ತ.ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ರಾಯಣ್ಣ ಜನೇವರಿ ೨೬ರಂದು ಬ್ರಿಟಿಷರು ಗಲ್ಲಿಗೇರಿಸಿದ್ದರು.ಅವರ ಸ್ಮರಣಾರ್ಥ ಈ ದಿನ ಆಚರಿಸಲಾಗುತ್ತಿದೆ ಎಂದರು.
ತಾಲೂಕಾ ಕಾರ್ಯಾಧ್ಯಕ್ಷ ನಿಂಗಣ್ಣ ಪೂಜಾರಿ, ಹಿರಿಯರಾದ ಮರಲಿಂಗ ಕಮರಡಗಿ, ಸಂಗೋಳಿ ರಾಯಣ್ಣ ಸಂಘದ ತಾಲೂಕಾಧ್ಯಕ್ಷ ಸುನೀಲ ಪೂಜಾರಿ, ಮಂಜುನಾಥ ದೊಡ್ಡಮನಿ, ಶಾಂತಪ್ಪ ಪೂಜಾರಿ, ರಾಯಣ್ಣ ಹಳೆಶಹಾಭಾದ, ನಾಗು ಹಳ್ಳಿ, ಶಿವಯೋಗಿ ಧರೆಪ್ಪಗೋಳ, ಅಶೋಕ ವಗ್ಗರ್, ಸುರೇಶ ಗಿರಣಿ, ಅಶೋಕ ಬೆಳಗುಂಪಿ, ಭೀಮು ಕಡಿಹಳ್ಳಿ, ಸಂತೋಷ ದೊಡ್ಡಮನಿ, ಗೊಲ್ಲಾಳಪ್ಪ ರಾವೂರ, ಸಂಗೋಳಿ ರಾಯಣ್ಣ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಕಮರಡಗಿ ಇತರರು ಇದ್ದರು.