ಕಲಬುರಗಿ: ಗಣರಾಜ್ಯೋತ್ಸವ ದಿನದ ಅಂಗವಾಗಿ ಧ್ವಜಾರೋಹಣದ ನಂತರ ಶಾಲೆಯ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿ ಹಾಗೂ ದಾಖಲಾತಿಯ ಸಂಖ್ಯೆಯಲ್ಲಿ ಹೆಚ್ಚಳ ವಾಗಲಿ ಎಂಬ ಸದುದ್ದೇಶದಿಂದ ಗಣರಾಜ್ಯೋತ್ಸವ ದಿನದಂದು ಶಾಲೆಯ ಮುಖ್ಯಗುರುಗಳಾದ ನೀಲಮ್ಮ ಅಂಗಡಿಯವರು ಶಾಲೆಯ 60 ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಟೈ ಬೆಲ್ಟ್ ಗಳನ್ನು ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ನಂತರ ಮಾತನಾಡಿದ ಮುಖ್ಯಗುರು ನೀಲಮ್ಮ ಅಂಗಡಿ ಅವರು, ಶಾಲೆಯ ದಾಖಲಾತಿಯಲ್ಲಿ ಗಣನೀಯ ಹೆಚ್ಚಳ ಮಾಡುವ ಉದ್ದೇಶದಿಂದ ಸರ್ಕಾರಿ ಶಾಲೆಯ ಮಕ್ಕಳು ಸಹ ಕಾನ್ವೆಂಟ್ ಶಾಲೆಯ ಮಕ್ಕಳಂತೆ ಟೈ ಬೆಲ್ಟ್ ಗಳನ್ನು ಧರಿಸಿ ಅತ್ಯಂತ ಖುಷಿಯಿಂದ ಶಾಲೆಗೆ ಆಗಮಿಸುವುದರಿಂದ ಇತರ ಮಕ್ಕಳಿಗೂ ಪ್ರೇರಣೆಯಾಗುವುದು.ಶಾಲೆಯಲ್ಲಿ ಮಕ್ಕಳಿಗೆ ಊಟದ ತಾಟುಗಳ ಕೊರತೆಯಿತ್ತು, ಸಪ್ತಗಿರಿ ವೆಂಕಟೇಶ್ವರ ಹೋಟೆಲ್ ಮಾಲೀಕರು ಮುಂದೆ ಬಂದು ಉತ್ತಮ ಗುಣಮಟ್ಟದ 30 ಊಟದ ತಾಟುಗಳನ್ನು ಶಾಲೆಯ ಮಕ್ಕಳಿಗಾಗಿ ದೇಣಿಗೆಯಾಗಿ ನೀಡಿದ್ದಾರೆ.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಮಕ್ಕಳ ದಾಖಲಾತಿ ಹೆಚ್ಚಳ ಮಾಡುವ ಉದ್ದೇಶ ಹೊಂದಿದ್ದು,ಇದೇ ರೀತಿ ಮುಂದೆಯೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲರ ಸಹಕಾರದೊಂದಿಗೆ ಶಾಲೆಯನ್ನು ಎಲ್ಲಾ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಶಹಾ ಬಜಾರ ಅಧ್ಯಕ್ಷರಾದ ಜಗದೀಶ ಅರ್ಜುನ ಸಿಂದೆ ಹಾಗೂ ಸದಸ್ಯರು ಶಾಲೆಯ ಮುಖ್ಯ ಗುರುಗಳಾದ ನೀಲಮ್ಮ ಅಂಗಡಿ ಇದ್ದರು.ಸಹ ಶಿಕ್ಷಕರಾದ ವಹಿದಾ ಅಂಜುಮ ನಿರೂಪಣೆ ಮಾಡಿದರು. ಶರಣಬಸಪ್ಪ ಸ್ವಾಗತ ಮಾಡಿದರು.
ವಿಮಲಾಭಾಯಿ ವಂದನಾರ್ಪಣೆ ಮಾಡಿದರು. ಕಾವಲು ಸಮಿತಿ ಸದಸ್ಯರಾದ ಗುಲಾಬ್ ಸಿಂಗ್,ಶಾಮರಾವ ಜಾಧವ, ಶಾರದಾ ಟೀಚರ್,ವಿದ್ಯಾರ್ಥಿಗಳು,ಅಂಗನವಾಡಿ ಕಾರ್ಯಕರ್ತರು ಶಿಕ್ಷಣ ಪ್ರೇಮಿಗಳು ಹಾಜರಿದ್ದರು.