ಕಲಬುರಗಿಯನ್ನು ನಂಬರ್ ೧ ಸ್ಥಾನಕ್ಕೆ ತರಲು ಶ್ರಮಿಸೋಣ: ಡಾ. ಮುರುಗೇಶ ಆರ್. ನಿರಾಣಿ

0
25

ಕಲಬುರಗಿ: ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಕಂಡು ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯು ಎಲ್ಲಾ ಕ್ಷೇತ್ರಗಳಲ್ಲಿ ನಂಬರ್ ಒನ್ ಸ್ಥಾನಕ್ಕೆ ತರಬೇಕು ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಮುರುಗೇಶ ಆರ್. ನಿರಾಣಿ ಅವರು ಪ್ರತಿಪಾದಿಸಿದರು.

ಬುಧವಾರ ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭಾರತದ ೭೩ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಹಾಗೂ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಮುಂದಿನ ಐದು ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯು ರಾಜ್ಯದಲ್ಲಿ ಟಾಪ್ ೧೦ನೇ ಜಿಲ್ಲೆಗಳಲ್ಲಿ ಒಂದಾಗಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು. ಜೊತೆಗೆ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಕೋನದಿಂದ ಮುಂದಿನ ೩೦ ವರ್ಷದಲ್ಲಿ ಸಾಧಿಸಬೇಕಾದ ಪ್ರಗತಿ ಕುರಿತು ನಿಖರ ಮಾಹಿತಿ ಸಂಗ್ರಹಿಸಿ ಅದರಂತೆ ಅನುಷ್ಠಾನಗೊಳಿಸಲು ಕಲಬುರಗಿ ವಿಜನ್-೨೦೫೦ ಡಾಕ್ಯೂಮೆಂಟ್ ಸಿದ್ಧಪಡಿಸಲಾಗುತ್ತಿದ್ದು, ಇದು ಜಿಲ್ಲೆಯ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ ಎಂದರು.

೩೭೧ಜೆ ಅನ್ವಯ ರಚನೆಗೊಂಡ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಗೆ ರೂ.೨,೭೭೧.೨೫ ಕೋಟಿ ಅನುದಾನ ಹಂಚಿಕೆಯಾಗಿ ರೂ. ೧,೭೧೨.೪೮ ಕೋಟಿ ಖರ್ಚು ಮಾಡಲಾಗಿದೆ. ಒಟ್ಟಾರೆಯಾಗಿ ೮,೦೯೫ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ೬,೭೦೦ ಪೂರ್ಣಗೊಳಿಸಿದ್ದು, ೧,೩೯೫ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಕ್ರಾಂತಿಗೆ ಸರ್ಕಾರ ಅತೀವ ಆಸಕ್ತಿ ಹೊಂದಿದೆ. ನೂತನ ಕೈಗಾರಿಕಾ ನೀತಿ ೨೦೨೦-೨೫ರಲ್ಲಿ ಬೆಂಗಳೂರು ದಾಚೆಗೆ ೨ನೇ ಮತ್ತು ೩ನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯನ್ನು ಗರಿಷ್ಠ ರಿಯಾಯಿತಿ ಮತ್ತು ಪ್ರೋತ್ಸಾಹ ದೊರೆಯಲು ವಲಯ-೧ರಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಕಲಬುರಗಿ ಜಿಲ್ಲೆಗೆ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಮಂಜೂರು ಮಾಡಿದ್ದು, ಇದು ೧,೦೦೦ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಇದಲ್ಲದೆ ಜಿಲ್ಲೆಯಲ್ಲಿ ಜ್ಯೂವಲರಿ ಪಾರ್ಕ್ ಸಹ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಕಲಬುರಗಿ ನಗರ ಈಗಾಗಲೇ ವಾಯು ಸಂಪರ್ಕ ಹೊಂದಿದ್ದರಿಂದ ಉದ್ಯಮಿಗಳನ್ನು ಇಲ್ಲಿ ಹೂಡಿಕೆಗೆ ಆಕರ್ಷಿಸಲು ಉದ್ದೇಶಿತ ಈ ಯೋಜನೆಗಳು ಹೊರತಾಗಿ ಒಂದೇ ಕಡೆ ೫,೦೦೦ ಎಕರೆ ಜಮೀನು ಭೂಸ್ವಾಧೀನ ಮಾಡಿಕೊಂಡು ಬೇರೆ ಬೇರೆ ಉದ್ಯಮಗಳನ್ನು ಆರಂಭಿಸುವ ಹಾಗೂ ಇಂಡಸ್ಟ್ರಿಯಲ್ ಹಬ್ ಆಗಿ ಪರಿವರ್ತಿಸುವ ಚಿಂತನೆ ನಡೆದಿದೆ ಎಂದರು.

ಬೆಂಗಳೂರಿನಲ್ಲಿ ನಡೆದ ’ಉದ್ಯಮಿಯಾಗು, ಉದ್ಯೋಗ ನೀಡು’ ಕಾರ್ಯಕ್ರಮದ ಯಶಸ್ಸಿನ ಪ್ರೇರಣೆಯೊಂದಿಗೆ ಕಲಬುರಗಿ ವಿಭಾಗದಲ್ಲಿ ಅಂದರೆ ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ವಿಜಯನಗರದ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರ ೨೦೨೨ರ ಜನವರಿ ೩ ರಂದು ಆಯೋಜಿಸಲಾಗಿತ್ತು. ಭೌತಿಕ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಒಟ್ಟು ೪೯೬೮ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಓದು ಮುಗಿಸಿದ ನಂತರ ಕೆಲಸ ಅರಸಿ ಬೇರೆಡೆಗೆ ವಲಸೆ ಹೋಗುವ ಬದಲಿಗೆ ಸ್ವಂತ ಉದ್ಯಮ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವಂತಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸುವುದು ಹೇಗೆ, ಯಾವ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಇದೆ. ಉದ್ಯಮ ಆರಂಭಕ್ಕೆ ಅನುಕೂಲವಾಗುವ ಸರ್ಕಾರದ ಯೋಜನೆಗಳು ಯಾವುವು, ಆರ್ಥಿಕ ನೆರವು ಹೇಗೆ, ಎಲ್ಲಿ ಪಡೆಯಬಹುದು ಎಂಬ ಮಾಹಿತಿ ಕಾರ್ಯಕ್ರಮದಲ್ಲಿ ದೊರೆಯಲಿದೆ ಎಂಬುದನ್ನು ತಜ್ಞರು ಕಾರ್ಯಕ್ರಮದಲ್ಲಿ ವಿವರಿಸಿದರು.

ಒಂದು ದಿನ ಕಾರ್ಯಕ್ರಮ ಮುಗಿದ ನಂತರ ನಮ್ಮ ಜವಾಬ್ದಾರಿ ಮುಗಿಯಿತು ಎಂದು ನಾವು ಭಾವಿಸುವುದಿಲ್ಲ. ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಆಸಕ್ತ ಅಭ್ಯರ್ಥಿಗಳಿಗೆ ೧೫-೩೦ ದಿನಗಳ ಹೆಚ್ಚುವರಿ ತರಬೇತಿ ನೀಡುವ ಉದ್ದೇಶ ಇದೆ. ವಿದ್ಯಾರ್ಥಿಗಳಿಗೆ ಉದ್ಯಮ ಕುರಿತ ಮಾಹಿತಿ/ತರಬೇತಿಗೆ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗುವುದು ಎಂದರು.

. ಕಲಬುರಗಿ ವಿಭಾಗದ ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ೨೦೨೨ರ ಜನವರಿ ೦೩ ರಂದು ’ಕೈಗಾರಿಕಾ ಅದಾಲತ್’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜಿಲ್ಲೆಯಿಂದ ೧೫ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು ೭೮ ಅರ್ಜಿಗಳು ಬಂದಿದ್ದು, ಸದರಿ ಅರ್ಜಿಗಳ ಕುರಿತು ಕೈಗಾರಿಕಾ ಅದಾಲತ್‌ನಲ್ಲಿ ನೇರವಾಗಿ ಉದ್ಯಮಿಗಳ ಜತೆ ಚರ್ಚಿಸಿ, ಪರಿಹಾರ ಸೂಚಿಸಲಾಗಿದೆ ಎಂದು ಹೇಳಿದರು.

ನಾನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ಕಲಬುರಗಿ ಜಿಲ್ಲೆಯು ಕೋವಿಡ್ (೨) ಅಲೆ ಹೆಚ್ಚಾಗಿದ್ದು ರಾಜ್ಯದಲ್ಲಿ ಮೊದಲನೆಯ ಸ್ಥಾನದಲ್ಲಿರುತ್ತದೆ. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಅಧಿಕಾರಿಗಳು, ಸಂಘ ಸಂಸ್ಥೆಗಳು ಹಾಗೂ ವಾರ್ತಾ ಇಲಾಖೆ ನೆರವಿನಿಂದ ಕೋವಿಡ್ (೨) ಅಲೆ ಕಡಿಮೆ ಮಾಡಿ (೨೭) ಸ್ಥಾನಕ್ಕೆ ಇಳಿಸಲು ಸಾಧ್ಯವಾಯಿತು ಎಂದರು.

ಕಲಬುರಗಿ ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟ ೧೮,೨೫,೯೯೪ ಜನರಿಗೆ ಕೋವಿಡ್ ಲಸಿಕೆ ಮೊದಲನೇ ಡೋಸ್ ನೀಡಿ ಶೇ.೯೯ರಷ್ಟು ಗುರಿ ಸಾಧಿಸಲಾಗಿದೆ. ಇನ್ನು ಎರಡನೇ ಡೋಸ್ ಪಡೆದವರ ಪ್ರಮಾಣ ಶೇ.೭೫ ಇದೆ. ಜಿಲ್ಲೆಯಾದ್ಯಂತ ೮೪,೬೪೪ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲನೇ ಡೋಸ್ ನೀಡಿ ಶೇ.೫೩ರಷ್ಟು ಪ್ರಗತಿ ಸಾಧಿಸಲಾಗಿದೆ. ಇದಲ್ಲದೆ ೭,೯೦೬ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ೬೦ ವರ್ಷ ಮೇಲ್ಪಟ್ಟ ಹಿರಿಯ ಜೀವಿಗಳಿಗೆ ಬೂಸ್ಟರ್‌ಡೋಸ್ ನೀಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ಮೂರನೇ ಅಲೆ ಮತ್ತು ಅದರ ರೂಪಾಂತರ ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಅಗತ್ಯಕ್ರಮ ಕೈಗೊಳ್ಳುವ ಮೂಲಕ ಆಸ್ಪತ್ರೆಗಳನ್ನು ಬಲವರ್ಧನೆಗೊಳಿಸಿದೆ. ತಾಲೂಕಾ ಆಸ್ಪತ್ರೆಗಳಲ್ಲಿ ವಿಶೇಷವಾಗಿ ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಆಕ್ಸಿಜನ್ ಸಮಸ್ಯೆಯಾಗದಂತೆ ಆಕ್ಸಿಜನ್ ಉತ್ಪಾದಿಸುವ ಘಟಕ ಸ್ಥಾಪನೆ, ಜಂಬೋ ಸಿಲಿಂಡರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಅನಗತ್ಯ ಆಸ್ಪತ್ರೆ ಭೇಟಿ ತಪ್ಪಿಸಲು ಇ-ಸಂಜೀವಿನಿ ಔಷಧ ಸೇವೆ ಆರಂಭಿಸಲಾಗಿದ್ದು, ಮೊಬೈಲ್ ಆಪ್ ಮೂಲಕ ಸಾರ್ವಜನಿಕರು ಮನೆಯಿಂದಲೇ ಅಗತ್ಯ ವೈದ್ಯಕೀಯ ಸೇವೆ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
೧೯೫೦ರ ಜನವರಿ ೨೬ ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿ, ಭಾರತವು ವಿಶ್ವದಲ್ಲಿ ತಾನೂ ಒಂದು ಸಾರ್ವಭೌಮ ರಾಷ್ಟ್ರವೆಂದು ಸಾರಿದ ದಿನವೇ ಗಣರಾಜ್ಯೋತ್ಸವದ ದಿನ. ರಾಷ್ಟ್ರದ ಸಾರ್ವಭೌಮತ್ವದ ಸಂಕೇತವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ನಮ್ಮ ಗಣರಾಜ್ಯದ ಇಂದಿನ ಅಸ್ತಿತ್ವಕ್ಕೆ ನಮ್ಮ ಸಂವಿಧಾನವೇ ತಳಹದಿ. ಈ ಸಂವಿಧಾನವನ್ನು ರಚಿಸಿದ್ದೂ ಕೂಡ ಒಂದು ಯಶೋಗಾಥೆಯೇ ಸರಿ, ಸಂವಿಧಾನ ಕರಡು ಸಮಿತಿಯಲ್ಲಿ ಮತ್ತು ರಚನಾ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ವಿಶೇಷವಾಗಿತ್ತು. ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಅಂಬೇಡ್ಕರ್ ಅವರಿಗೆ ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅನುಭವ ನೆರವಾಯಿತು. ಇವರ ಸೇವೆಗೆ ಮನ್ನಣೆ ದೊರೆತು ಇವರನ್ನು ಸಂವಿಧಾನದ ಪಿತಾಮಹ ಎಂದು ನಾವು ಸ್ಮರಿಸುವಂತಾಗಿದೆ ಎಂದು ತಿಳಿಸಿದರು.

ಭಾರತದ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಅಭಿವೃದ್ಧಿಯ ಸಂಕಲ್ಪ ಮಾಡಿರುವ ನಮ್ಮ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ಅಭಿವೃದ್ಧಿ ಪಥದತ್ತ ಮುನ್ನಡೆದಿದೆ. ಕೃಷಿಕರ ಆದಾಯವನ್ನು ೨೦೨೩ರ ವೇಳೆಗೆ ದ್ವಿಗುಣಗೊಳಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರವು ರಾಜ್ಯದಲ್ಲಿ ಪ್ರತ್ಯೇಕ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಿದೆ. ಈ ಮೂಲಕ ಕೃಷಿ ಉತ್ಪನ್ನ, ಉಪ ಉತ್ಪನ್ನಗಳ ತಯಾರಿಕೆಗೆ ರೈತರಿಗೆ ಅಗತ್ಯ ಸಹಕಾರ ನೀಡಿ ಆದಾಯ ದ್ವಿಗುಣಗೊಳಿಸಲು ಐತಿಹಾಸಿಕ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು.

ರೈತರು ಬೆಳೆದ ಹಣ್ಣು ಮತ್ತು ತರಕಾರಿ ಬೆಳೆಗಳು ಹಾಳಾಗದಂತೆ ಶೇಖರಣೆ ಮಾಡಲು ಕಲಬುರಗಿಯಲ್ಲಿ ರೂ.೯.೮೦ಕೋಟಿ. ವೆಚ್ಚದಲ್ಲಿ ೫೦೦೦ ಮೆಟ್ರಿಕ್‌ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು ಮಂಜೂರಾತಿ ನೀಡಿ ಟೆಂಡರ್ ಕರೆಯಲಾಗಿದ್ದು, ಈ ವರ್ಷದ ಅಂತ್ಯದಲ್ಲಿಯೇ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ರೈತರಿಗೆ ಸಮರ್ಪಿಸಲಿದ್ದೇವೆ ಎಂದರು.

ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದಾಗಿ ಜಿಲ್ಲೆಯ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಉದ್ದು ಹಾಗೂ ಇತರೆ ಬೆಳೆಗಳು ಸುಮಾರು ೨.೪೪ ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಯಾಗಿವೆ. ಇದರಲ್ಲಿ ೨.೦೮ ಲಕ್ಷ ರೈತರಿಗೆ ಇಲ್ಲಿಯವರೆಗೆ ರೂ.೧೫೭.೯೮ ಕೋಟಿ ಪರಿಹಾರ ಒದಗಿಸಿದೆ ಎಂದು ಹೇಳಿದರು.

ಈ ಭಾಗದ ಪ್ರಮುಖ ಬೆಳೆ ತೊಗರಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ಜಿಲ್ಲೆಯಾದ್ಯಂತ ೧೮೪ ತೊಗರಿಖರೀದಿ ಕೇಂದ್ರ ಸ್ಥಾಪಿಸಲಾಗಿದೆ.

ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ ರೂ.೬,೦೦೦ ಜೊತೆಗೆ ರಾಜ್ಯ ಸರ್ಕಾರದ ೪,೦೦೦ ರೂ. ಪ್ರೋತ್ಸಾಹಧನ ನೀಡುವ ಯೋಜನೆಯಡಿ ಜಿಲ್ಲೆಯಲ್ಲಿ ೨.೮೫ ಲಕ್ಷ ರೈತರು ನೋಂದಣಿಯಾಗಿದ್ದು, ೨೦೧೯-೨೦ನೇ ಸಾಲಿನಿಂದ ಇಲ್ಲಿಯವರೆಗೆ ೨.೬೮ ಲಕ್ಷ ರೈತರಿಗೆ ರೂ.೫೨೮.೭೯ ಕೋಟಿ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ೨೦೨೧-೨೨ನೇ ಸಾಲಿಗೆ ೮೦ ಲಕ್ಷ ಗುರಿ ನೀಡಿದ್ದು, ಇದೂವರೆಗೆ ೬೧.೨೭ ಲಕ್ಷ ಮಾನವ ದಿನ ಸೃಜಿಸಿ ಶೇ.೭೬.೫೮ ರಷ್ಟು ಪ್ರಗತಿ ಸಾಧಿಸಿದೆ. ೧,೯೦,೭೭೩ ಕುಟುಂಬಗಳನ್ನೊಳಗೊಂಡು ೩,೪೦,೮೦೫ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ರೂ.೨೧,೫೫೩ ಲಕ್ಷ ಖರ್ಚು ಮಾಡಿದೆ. ವಿಶೇಷವಾಗಿ ಜಲಮೂಲಗಳ ಸಂರಕ್ಷಿಸುವ ದೃಷ್ಠಿಯಿಂದ ೨೨ ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಇತ್ತೀಚೆಗೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ರಾಜ್ಯದ ೧೮,೭೮,೬೭೧ ವಸತಿರಹಿತ ಮತ್ತು ೬,೬೧,೫೩೫ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಲು ಅನುಮೋದನೆ ನೀಡಿದ್ದು, ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆಂಬ ರಾಜ್ಯ ಸರ್ಕಾರದ ಮಹಾದಾಸೆಗೆ ಬಲ ಬಂದಿದೆ. ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ೨೦೨೧-೨೨ನೇ ಸಾಲಿಗೆ ಕಲಬುರಗಿ ಜಿಲ್ಲೆಗೆ ಹೊಸದಾಗಿ ೯,೦೦೦ ಮನೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿ.ಪಿ.ಎಲ್. ಕುಟುಂಬದ ೨೮೭ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಕೇಂದ್ರ ಸರ್ಕಾರದಿಂದ ೫೦ ಸಾವಿರರೂ. ಜೊತೆಗೆ ರಾಜ್ಯ ಸರ್ಕಾರದಿಂದ ೨೦೫ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ರೂ.೧ ಲಕ್ಷ ಪರಿಹಾರ ನೀಡಲಾಗಿದೆ. ಎ.ಪಿ.ಎಲ್. ಕುಟುಂಬದ ೩೩೨ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದಿಂದ ತಲಾ ೫೦ ಸಾವಿರ ರೂ. ಪರಿಹಾರ ಡಿ.ಬಿ.ಟಿ. ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.

ಶಹಾಬಾದ ಪಟ್ಟಣದಲ್ಲಿ ಕಳೆದ ೨೦ ವರ್ಷದಿಂದ ಪಾಳು ಬಿದ್ದಿದ್ದ ಇ.ಎಸ್.ಐ.ಸಿ. ಆಸ್ಪತ್ರೆಯನ್ನು ೧೪ ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಣಗೊಳಿಸುತ್ತಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಆರೋಗ್ಯ ಸೇವೆಗೆ ಇದು ಲಭ್ಯವಾಗಲಿದೆ ಎಂದರು.

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಇದೂವರೆಗೆ ೪,೬೦,೮೦೪ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಈ ಯೋಜನೆಯಡಿ ಇದೂವರೆಗೆ ೧,೦೬,೯೦೦ ಫಲಾನುಭವಿಗಳ ೯,೦೨೩.೧೭ ಲಕ್ಷರೂ. ವೈದ್ಯಕೀಯ ಖರ್ಚನ್ನು ಸರ್ಕಾರ ಭರಿಸಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ೭೩ ಮೆಟ್ರಿಕ್ ಪೂರ್ವ ಮತ್ತು ೫೫ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿದ್ದು, ೯,೫೩೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಉಚಿತ ಊಟ, ವಸತಿ ಇನ್ನಿತರ ಮೂಲ ಸೌಲಭ್ಯಕ್ಕಾಗಿ ೨೦೨೦-೨೧ನೇ ಸಾಲಿಗೆ ೧,೯೩೮.೧೪ ಲಕ್ಷ ರೂ. ಖರ್ಚು ಮಾಡಲಾಗಿದೆ. ಇದೇ ಆರ್ಥಿಕ ಸಾಲಿಗೆ ೯೩೧೦ ವಿದ್ಯಾರ್ಥಿಗಳಿಗೆ ೧೦೨.೪೮ ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಅದೇ ರೀತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯದ ೨,೭೫೦ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ೬೪೪.೫೦ ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ೬೩,೮೧೫ ಅಂತ್ಯೋದಯ ಅನ್ನ ಪಡಿತರ ಚೀಟಿಯ ೨,೬೨,೫೭೯ ಸದಸ್ಯರಿಗೆ, ೪,೭೬,೬೩೨ ಆದ್ಯತಾ ಪಡಿತರ ಚೀಟಿಯ ೧೬,೦೦,೪೭೮ ಸದಸ್ಯರಿಗೆ ಉಚಿತ ಆಹಾರದಾನ್ಯ ನೀಡಲಾಗುತ್ತಿದೆ. ಜನವರಿ-೨೦೨೨ ಮಾಹೆಗೆ ಎನ್.ಎಫ್.ಎಸ್.ಎ. ಯೋಜನೆಯಡಿ ಎ.ಎ.ವೈ ಪಡಿತರ ಚೀಟಿಗೆ ೩೫ ಕೆ.ಜಿ. ಅಕ್ಕಿ ಹಾಗೂ ಆದ್ಯತಾ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ೫ ಕೆ.ಜಿ. ಅಕ್ಕಿ ಮತ್ತು ಪಡಿತರ ಚೀಟಿಗೆ ತಲಾ ೨ ಕೆ.ಜಿ. ಗೋಧಿರಂತೆ ೭೬,೦೯೮.೧೦ ಕ್ವಿಂಟಾಲ್ ಅಕ್ಕಿ ಮತ್ತು ೧,೬೩೦ ಕ್ವಿಂಟಾಲ್ ಗೋಧಿ ಉಚಿತವಾಗಿ ವಿತರಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಹೆಚ್ಚುವರಿಯಾಗಿ ೮೯,೧೧೦ ಕ್ವಿಂಟಾಲ್ ಅಕ್ಕಿ ಉಚಿತವಾಗಿ ವಿತರಿಸಲಾಗಿದೆ ಎಂದರು.

ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಮತ್ತು ರಾಜ್ಯ ಸರ್ಕಾರದ ಮಧ್ಯಾಹ್ನ ಉಪಹಾರ ಯೋಜನೆಯಡಿ ಜಿಲ್ಲೆಯ ೨.೮೫ ಲಕ್ಷ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ವಾರದಲ್ಲಿ ೩ ದಿನ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಅಥವಾ ಬಾಳೆ ಹಣ್ಣು ವಿತರಿಸಲಾಗುತ್ತಿದ್ದು, ಇದರಿಂದ ಶಾಲೆಯಲ್ಲಿ ಶೇ.೧೫ರಷ್ಟು ಮಕ್ಕಳ ಹಾಜರಾತಿ ಹೆಚ್ಚಳವಾಗಿದೆ. ಕಳೆದ ೨ ವರ್ಷಗಳಿಂದ ಜಿಲ್ಲೆಯಲ್ಲಿ ೩೮ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ೬೫೬ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಧ್ಯಾ ಸುರಕ್ಷಾ ಯೋಜನೆಯಡಿ ಜಿಲ್ಲೆಯ ೧,೦೨,೩೭೯ ಮತ್ತು ವೃದ್ಧಾಪ್ಯ ವೇತನಯೋಜನೆಯಡಿ ೪೪,೯೫೨ ಫಲಾನುಭವಿಗಳಿಗೆ ತಲಾ ೧,೨೦೦ ರೂ. ಪಿಂಚಣಿ ನೀಡಲಾಗುತ್ತಿದೆ. ಮಾಸಿಕ ೮೦೦ ರೂ. ರಂತೆ ೫೨,೬೪೯ ಜನರು ವಿಧವಾ ವೇತನ ಪಡೆಯುತ್ತಿದ್ದಾರೆ. ಅಂಗವಿಕಲತೆ ಪ್ರಮಾಣಕ್ಕೆ ಅನುಗುಣವಾಗಿ ೩೭,೦೯೧ ವಿಕಲಚೇತನರಿಗೆ ೮೦೦ ರೂ./ ೨೦೦೦ ರೂ. ಗಳಂತೆ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಮನಸ್ವಿನಿ ಮತ್ತು ಮೈತ್ರಿ ಯೋಜನೆಯಡಿ ಕ್ರಮವಾಗಿ ೨,೩೦೦ ಮತ್ತು ೧೧೪ ಫಲಾನುಭವಿಗಳು ತಲಾ ೬೦೦ ರೂ. ಪಿಂಚಣಿ ಪಡೆಯುತ್ತಿದ್ದಾರೆ. ಮೃತ ರೈತನ ಪತ್ನಿಗೆ ವಿಧವಾ ವೇತನ ಯೋಜನೆಯಡಿ ೨೪೦ ಫಲಾನುಭವಿಗಳಿಗೆ ಮಾಸಿಕ ೨೦೦೦ ರೂ. ಪಿಂಚಣಿ ನೀಡುವ ಮೂಲಕ ಸರ್ಕಾರವು ಸಾಮಾಜಿಕ ಭದ್ರತೆ ಒದಗಿಸಿದೆ ಎಂದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೈದ್ರಾಬಾದಿನ ಏಶಿಯಾ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯು ತನ್ನ ತರಬೇತಿ ಶಾಲೆ ಇಲ್ಲಿ ಆರಂಭಿಸಿದ್ದು, ಇದರಿಂದ ಪೈಲಟ್ ಆಗಬೇಕೆಂಬ ಇಲ್ಲಿನ ಆಕಾಂಕ್ಷಿಗಳ ಕನಸಿಗೆ ರೆಕ್ಕೆ ಬಂದಿದೆ. ನವದೆಹಲಿಯ ರೆಡ್ ಬರ್ಡ್ ಏವಿಯೇಷನ್ ಅಕಾಡೆಮಿ ಸಂಸ್ಥೆಯ ಫ್ಲೈಯಿಂಗ್ ಶಾಲೆ ಸಹ ಶೀಘ್ರದಲ್ಲಿಯೆ ಆರಂಭಗೊಳ್ಳಲಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷದಲ್ಲಿ ನೆರೆ ಹಾವಳಿ, ಕೋವಿಡ್ ಸಂಕಷ್ಟದ ನಡುವೆ ಅಭಿವೃದ್ಧಿಯ ಚಕ್ರ ನಿಂತಿಲ್ಲ. ರಾಷ್ಟ್ರದ ಪ್ರಗತಿಗೆ ಪ್ರತಿಯೊಬ್ಬರು ದುಡಿಯೋಣ, ಭವ್ಯ ಭಾರತ ನಿರ್ಮಾಣ ಮಾಡೋಣ. ಕೋವಿಡ್‌ನೊಂದಿಗೆ ನಮ್ಮ ಬದುಕು ಸಾಗಬೇಕಾಗಿದೆ ಎಂದರು.
ಪರೇಡ್ ಕಮಾಂಡರ್ ಕಲಬುರಗಿ ಆರ್.ಪಿ.ಐ. ಡಿ.ಎ.ಆರ್. ಹನುಮಂತ ನಾಯಕ ಹಾಗೂ ಸಹಾಯಕ ಪರೇಡ್ ಕಮಾಂಡರ್ ಆರ್.ಎಸ್.ಐ., ಡಿ.ಎ.ಆರ್. ದುರ್ಗಾಸಿಂಹ ನೇತೃತ್ವದಲ್ಲಿ ನಡೆದ ಪರೇಡಿನಲ್ಲಿ ಡಿ.ಎ.ಆರ್., ಸಿ.ಎ.ಆರ್., ಕೆ.ಎಸ್.ಆರ್.ಪಿ., ಸಿವಿಲ್ ಜಿಲ್ಲಾ ತಂಡ, ಸಿವಿಲ್ ನಗರ ತಂಡ, ಕೇಂದ್ರ ಕಾರಾಗೃಹ, ಹೋಮಗಾರ್ಡ್, ಅಬಕಾರಿ ಇಲಾಖೆ, ಅರಣ್ಯ ಕಾರ್ಯಕಡೆ, ಅಗ್ನಿ ಶಾಮಕದಳ, ಪೊಲೀಸ್ ವಾದ್ಯ ವೃಂದ ಸೇರಿದಂತೆ ಒಟ್ಟು ೧೧ ತುಕಡಿಗಳು ಪೆರೇಡ್ ಗೌರವ ವಂದನೆ ಸಲ್ಲಿಸಿದವು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪಡೆದ ಲಕ್ಷ್ಮಿಕಾಂತ ದಿಗಂಬರಾವ ಹಿಬಾರೆ ಹಾಗರಗಿ ಹಾಗೂ ಅಫಜಲಪುರ ತಾಲೂಕಿನ ಹನುಮಂತರಾಯ ಮಲ್ಲೇಶಪ್ಪ ಹಸರಗುಂಡಗಿ ಅವರಿಗೆ ನಗದು ರೂಪದಲ್ಲಿ ೫೦ ರೂ. ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.

ಕಲಬುರಗಿ ದಕ್ಷಿಣ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ ಜಿ. ಜಾಧವ, ಕಲಬುರಗಿ ಗ್ರಾಮೀಣ ವಿಧಾನಸಭೆ ಶಾಸಕ ಬಸವರಾಜ ಮತ್ತಿಮಡು ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಡಾ. ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದ್ರಕಾಂತ ಜಿ. ಪಾಟೀಲ (ಚಂದು ಪಾಟೀಲ), ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಕಲಬುರಗಿ ನೀರಾವರಿ ಯೋಜನೆಗಳ ವಲಯದ ಅಚ್ಚುಕಟ್ಟು ಪ್ರಾದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ್ ಗುಂಡಪ್ಪ ಗುಗಳೆ, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ನಲಿನ್ ಅತುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ ಸಸಿ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಹಾಯಕ ಆಯುಕ್ತೆ ಮೋನಾ ರೋಟ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here