ಬೆಳಗಾವಿ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ

0
10

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆಯ 21ನೇ ಅವಧಿಯ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್‌ ಸ್ಥಾನ ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಮೀಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯಿಂದ ಪ್ರಕಟಗೊಳ್ಳುತ್ತಿದ್ದಂತೆಯೇ, ಆಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದೆ.

ನಾಯಕರ ಮೇಲೆ ಒತ್ತಡ ತರಲು ಲಾಬಿ ಆರಂಭಿಸಿದ್ದಾರೆ. ನಗರದ ಪ್ರಥಮ ಪ್ರಜೆ ಯಾರಾಗಬಹುದು ಎನ್ನುವ ಕುತೂಹಲವೂ ಮೂಡಿದೆ.

Contact Your\'s Advertisement; 9902492681

ಹೋದ ವರ್ಷ ಅಂದರೆ ಸೆ.3ರಂದು ನಡೆದಿದ್ದ ಚುನಾವಣೆಯಲ್ಲಿ ಈ ಮಹಾನಗರಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಕ್ಷಗಳ ಅಧಿಕೃತ ಚಿಹ್ನೆಗಳ ಮೇಲೆ ಸ್ಪರ್ಧಿಸಿದ್ದರು. ಸೆ.6ರಂದು ಫಲಿತಾಂಶ ಪ್ರಕಟವಾಗಿತ್ತು. 58 ಸದಸ್ಯ ಬಲದ ಈ ಸ್ಥಳೀಯ ಸಂಸ್ಥೆಯಲ್ಲಿ 35 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಿಜೆಪಿಯು ಬಹುಮತ ಗಳಿಸಿದೆ. ಹಿಂದೆಲ್ಲಾ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದರು.

ಆಗ ಮರಾಠಿ ಭಾಷಿಗರೆಲ್ಲರೂ ‘ನಮ್ಮವರು’ ಎಂದು ಹೇಳಿಕೊಳ್ಳುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ಅಧಿಕಾರದ ಸೂತ್ರ ಹಿಡಿಯುತ್ತಿದ್ದರು. ಇದಕ್ಕೆ ಈ ಬಾರಿ ಕಡಿವಾಣ ಬಿದ್ದಿದೆ.

ರಾಜಕೀಯ ಪಕ್ಷಗಳ ತೀವ್ರ ಹಣಾಹಣಿಯಲ್ಲಿ ಎಂಇಎಸ್ ಕೊಚ್ಚಿ ಹೋಗಿದೆ. ಬಿಜೆಪಿ-35, ಕಾಂಗ್ರೆಸ್-10, ಎಐಎಂಐಎಂ-1 ಹಾಗೂ ಪಕ್ಷೇತರರು-12 ಸ್ಥಾನಗಳನ್ನು ಗಳಿಸಿದ್ದಾರೆ. ಅಧಿಕಾರ ಹಿಡಿಯುವ ಉತ್ಸಾಹದಲ್ಲಿ ಬಿಜೆಪಿಯವರು ಇದ್ದಾರೆ. ನಗರಕ್ಕೆ ಇದೇ ಮೊದಲ ಬಾರಿಗೆ ಬಿಜೆಪಿ ಮೇಯರ್‌-ಉಪಮೇಯರ್‌ ಮಾಡಬೇಕೆಂಬ ಉಮೇದು ಅವರದಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಯಾರೇ ಮೇಯರ್‌ ಹಾಗೂ ಉಪ ಮೇಯರ್‌ ಆದರೂ ಪಕ್ಷ ಪ್ರತಿನಿಧಿಸುವ ಮೊದಲಿಗರು ಎಂಬ ಹೆಗ್ಗಳಿಕೆಯೂ ಅವರದಾಗಲಿದೆ.

35 ಮಂದಿ ಬಿಜೆಪಿ ಸದಸ್ಯರಲ್ಲಿ ವಾರ್ಡ್‌ ನಂ.43ರ ವಾಣಿ ವಿಲಾಸ ಜೋಶಿ, ವಾರ್ಡ್‌ ನಂ.50ರ ಸಾರಿಕಾ ಪಾಟೀಲ, ವಾರ್ಡ್‌ ನಂ.33ರ ರೇಷ್ಮಾ ಪಾಟೀಲ, ವಾರ್ಡ್‌ ನಂ.49ರ ದೀಪಾಲಿ ಟೋಪಗಿ, ವಾರ್ಡ್‌ ನಂ.54ರ ಮಾಧವಿ ರಾಘೋಚೆ, ವಾರ್ಡ್‌ ನಂ.57ರ ಶೋಭಾ ಸೋಮನಾಚೆ, ವಾರ್ಡ್‌ ನಂ. 55ರ ಸವಿತಾ ಪಾಟೀಲ ಹಾಗೂ ವಾರ್ಡ್‌ ನಂ.58ರ ಪ್ರಿಯಾ ಸಾತಗೌಡರ ಸಾಮಾನ್ಯ ಮಹಿಳೆಯರಿಗೆ ಮೀಸಲಾಗಿದ್ದ ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ.

ಮೀಸಲಾತಿ ಬಲದಲ್ಲಿ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸುವುದಕ್ಕೆ ಅರ್ಹತೆಯನ್ನೂ ಗಳಿಸಿದ್ದಾರೆ. ಇವರಲ್ಲಿ ವಾಣಿ ಜೋಶಿ ಮತ್ತು ಸಾರಿಕಾ ಪಾಟೀಲ ಹೆಸರುಗಳು ಮುಂಚೂಣಿಯಲ್ಲಿವೆ. ಬಿಜೆಪಿ ನಾಯಕರು ಯಾವ ಸಮಾಜದ ಸದಸ್ಯೆಗೆ ಮಣೆ ಹಾಕಲಿದ್ದಾರೆ, ಕೊನೆ ಕ್ಷಣದ ಬೆಳವಣಿಗೆಗೆಳೇನಾಗಲಿವೆ ಎನ್ನುವುದು ಕುತೂಹಲ ಮೂಡಿಸಿದೆ.

ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಮೀಸಲಾದ ವಾರ್ಡ್‌ನಿಂದ ಬಿಜೆಪಿಯಲ್ಲಿ ಯಾರೊಬ್ಬ ಸದಸ್ಯೆಯೂ ಇಲ್ಲ. ಸಾಮಾನ್ಯ ವರ್ಗದಿಂದ ಗೆದ್ದಿರುವ ಮಹಿಳೆಯರಲ್ಲಿ ಹಿಂ.ವರ್ಗ ‘ಬಿ’ಗೆ ಸೇರಿದ ಮಹಿಳೆಯರಿದ್ದರೆ ಅವರು ಜಾತಿ ಪ್ರಮಾಣಪತ್ರ ಪ್ರಸ್ತುತಪಡಿಸಿ ಸ್ಪರ್ಧಿಸಬಹುದಾಗಿದೆ ಎಂದು ತಿಳಿದುಬಂದಿದೆ.

ಬಹುಮತ ಇಲ್ಲದಿರುವುದರಿಂದ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಕಂಡುಬಂದಿಲ್ಲ.ಈ ನಡುವೆ, ಚುನಾವಣೆಯಲ್ಲಿ ರಣತಂತ್ರ ರೂಪಿಸಿದ್ದ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಆಯ್ಕೆಯಾದವರು ಅಭ್ಯರ್ಥಿ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯು ಫೆಬ್ರುವರಿ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೆ.3ರಂದೇ ಚುನಾವಣೆ ಮುಗಿದಿದ್ದರೂ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ಈವರೆಗೂ ನಡೆದಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here