ಶಹಾಬಾದ: ಬೀದರ್ ಜಿಲ್ಲೆ, ಹುiನಾಬಾದ್ ತಾಲೂಕಿನ ತಹಶೀಲ್ದಾರ್ ಡಾ. ಪ್ರದೀಪ್ ಹಿರೇಮಠ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಮಾತನಾಡಿ, ತಹಸೀಲ್ದಾರ ಹಿರೇಮಠ್ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕೆಲ ವ್ಯಕ್ತಿಗಳು ಹಠಾತ್ ಆಗಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.ಇದೊಂದು ಖಂಡನೀಯವಾದುದು.ಹಲ್ಲೆ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ದಿಟ್ಟ ಹೆಜ್ಜೆ ಇಡಬೇಕೆಂದು ಒತ್ತಾಯಿಸಿದರು.
ಈ ಹಿಂದೆಯೂ ಚಿಕ್ಕಬಳ್ಳಾಪುರ ದ ಹಿರಿಯಣ್ಣನ ಹಳ್ಳಿಯಲ್ಲಿ, ಭೂಮಾಪಕ ನಾರಾಯಣಸ್ವಾಮಿ ಅವರ ಮೇಲೆ, ಪಾಂಡವಪುರ ತಹಶೀಲ್ದಾರ್ ಹಾಗೂ ೧೨ ನೌಕರರ ಮೇಲೆ, ಉಡುಪಿಯ ಭೂಮಾಪಕರ ಮೇಲೆ ಹಲ್ಲೆಗಳಾಗಿದೆ. ಇದಕ್ಕೆ ಕಾರಣ ನೌಕರರ ಕೊರತೆಯಾಗಿದೆ. ಸುಮಾರು ೨ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ನೌಕರರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಕೂಡಲೇ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿದರು.ತಪ್ಪಿತಸ್ಥರ ಮೇಲೆ ಕೂಡಲೆ ಕ್ರಮ ಜರುಗಿಸಬೇಕು.ಅಲ್ಲದೇ ಸಕರಕಾರ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯ ಸಂಘವು ತೆಗೆದುಕೊಳ್ಳುವ ನಿರ್ಧಾರದಂತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯ ಶಶಿಕಾಂತ ಭರಣಿ, ಪ್ರಧಾನ ಕಾರ್ಯದರ್ಶಿ ಸಂಜಯ ರಾಠೋಡ, ಗೌರವಾಧ್ಯಕ್ಷ ಸಂತೋಷ ಸಲಗರ್, ಸದಸ್ಯರಾದ ಏಮನಾಥ ರಾಠೋಡ, ಜಗಪ್ಪ.ಆರ್. ಹೊಸಮನಿ,ಬನ್ನಪ್ಪ ಸೈದಾಪೂರ, ರಿಹಾನಾ ಪರವಿನ್, ಚನ್ನಬಸಪ್ಪ ಕೊಲ್ಲೂರ್, ಶಾಂತಮಲ್ಲ ಶಿವಭೋ, ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ, ಮಹ್ಮದ್ ಖಾದ್ರಿ, ಗ್ರಾಮ ಲೆಕ್ಕಿಗ ರೇವಣಸಿದ್ಧ,ಮುನೀರ, ಶಂಕರ,ಲಕ್ಷ್ಮಿಪುತ್ರ, ಶಾಂತಪ್ಪ ಸೇರಿದಂತೆ ಅನೇಕರು ಇದ್ದರು.