ಶಹಾಬಾದ: ಓದುವ ಹಂಬಲ ಹಾಗೂ ಏನಾದರೂ ಸಾಧಿಸಬೇಕೆಂಬ ಛಲ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಸುಧಾರಾಣಿ ನಾಟೇಕಾರ ಅವರೇ ಸಾಕ್ಷಿ ಎಂದು ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ ಹೇಳಿದರು.
ಅವರು ಶನಿವಾರ ನಗರದ ಪೊಲೀಸ್ ಠಾಣೆ ವತಿಯಿಂದ ಡಿವಾಯ್‌ಎಸ್‌ಪಿ ಕಚೇರಿಯಲ್ಲಿ ಸುಧಾರಾಣಿ ನಾಟೇಕಾರ ಅವರು ಪಿಎಸ್‌ಐ ಆಗಿ ಆಯ್ಕೆಯಾಗಿರುವುದಕ್ಕೆ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಧನೆಮಾಡುವವರಿಗೆ ಯಾವುದು ಅಡ್ಡಿಯಾಗಲ್ಲ.ಆದರೆ ಸಾಧಿಸುವ ಛಲವೊಂದಿದ್ದರೇ ಎಲ್ಲ ಅಡೆತಡೆಗಳು ಸರಳವಾಗುತ್ತವೆ. ಸತತ ಪರಿಶ್ರಮ, ಅಭ್ಯಾಸದಿಂದ ಪಿಎಸ್‌ಐ ಆಗಿ ನೇಮಕವಾಗಿದ್ದಾರೆ.ಅವರು ನಮ್ಮ ಇಲಾಖೆಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯ.ಅವರು ಇನ್ನೂ ಅಭ್ಯಾಸ ಮಾಡಿ ಕೆಎಎಸ್ ಹಾಗೂ ಐಎಎಸ್ ಪರೀಕ್ಷೆ ಬರೆಯಬೇಕು ಎಂಬ ಆಸೆ ಹೊಂದಿದ್ದು, ಇನ್ನೂ ಅವರ ಅಭ್ಯಾಸ ನಿರಂತರವಾಗಿರಲಿ. ಅವರ ಆಸೆ ಈಡೇರಲಿ ಎಂದು ಶುಭಕೋರಿದರು.
ನಗರ ಪೊಲೀಸ್ ಠಾಣೆಯ ಪಿಐ ಸಂತೋಷ ಹಳ್ಳೂರ್ ಮಾತನಾಡಿ, ಸಾಧನೆ ಯಾರಪ್ಪನ ಸ್ವತ್ತು ಅಲ್ಲ.ಅದು ಸಾಧಕನ ಸ್ವತ್ತು. ಸುಧಾರಾಣಿ ಸಾಧನೆಗೆ ಅವರ ಕುಟುಂಬದವರ ಪೋತ್ಸಾಹ ಪ್ರಮುಖವಾದುದು. ಮುಂದೆ ಇವರು ಶೋಷಿತ ಹೆಣ್ಣುಮಕ್ಕಳ ರಕ್ಷಣೆಯಾಗಿ ತೊಟ್ಟಿಲು ತೂಗುವ ಕೈ ದೇಶವನ್ನೂ ಆಳುತ್ತದೆ ಎಂಬುದನ್ನು ತೋರಿಸಲಿ. ಎಲ್ಲಾ ರಂಗಗಳಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಇಂತಹವರು ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಲಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ಸುಧಾರಾಣಿ ನಾಟೇಕಾರ, ನನ್ನ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದೆ. ಅಲ್ಲಿಂದಲೇ ನನ್ನ ಸಾಧನೆ ಪ್ರಾರಂಭವಾಯಿತು. ನನ್ನಕೈಲಿ ಏನೂ ಆಗುವುದಿಲ್ಲ ಎಂಬ ಕೀಳರಿಮೆ ಬಿಟ್ಟು, ಸತತ ಪ್ರಯತ್ನ ಮಾಡಿದರೆ ಸಾಧನೆ ತಾನಾಗಿ ಒಲಿದು ಬರುತ್ತದೆ. ಮನೆಯ ಸಮಸ್ಯೆಗಳನ್ನು ಕಾರಣ ಕೊಡದೇ ಸಾಧನೆ ಮಾಡಬೇಕು. ನನ್ನ ಸಾಧನೆಯಲ್ಲಿ ನನ್ನ ತಾಯಿ-ತಂದೆ ಸಹಕಾರ ಪ್ರಮುಖವಾಗಿದೆ. ನಾನು ಆಯ್ಕೆಯಾದ ಇಲಾಖೆಯಿಂದ ಸನ್ಮಾನ ಮಾಡಿರುವುದು ನನ್ನ ಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಹೇಳಿದರು.
ನಾಗೇಂದ್ರ ನಾಟೇಕಾರ, ಶೋಭಾ ನಾಟೇಕಾಎ, ಶಿವ ನಾಟೇಕಾರ, ಹರೀಶ ಕರಣಿಕ್, ವೆಂಕಟೇಶ, ಪೊಲೀಸ್ ಸಿಬ್ಬಂದಿಗಳಾದ ನಿಂಗಣ್ಣಗೌಡ ಪಾಟೀಲ, ಹುಸೇನ ಪಾಷಾ,ಬಸವಣ್ಣಪ್ಪ,ಸತೀಶ ಪೂಜಾರಿ, ಮಾಳಪ್ಪ ಪೂಜಾರಿ, ಮದಸೂದನ್,ದೊಡ್ಡಪ್ಪ ಪೂಜಾರಿ,ಮಹಾನಂದ ಸೇರಿದಂತೆ ಅನೇಕರು ಇದ್ದರು.