ಮುಸ್ಲಿಂ ಸಮುದಾಯದ ಉಸ್ತಾದ್/ಉಲೇಮಾಗಳಿಂದ ಕಲಿಯುವಂತದ್ದು ಬಹಳಷ್ಟು ಇದೆ

0
17
  • ನವೀನ್ ಸೂರಿಂಜೆ

ಹಿಂದೂ ಧರ್ಮದ ಧಾರ್ಮಿಕ ನಾಯಕರು ಮುಸ್ಲಿಂ ಸಮುದಾಯದ ಉಸ್ತಾದ್/ಉಲೇಮಾಗಳಿಂದ ಕಲಿಯುವಂತದ್ದು ಬಹಳಷ್ಟು ಇದೆ. ಸಾವಿರಾರು ಜನ ಸೇರಿರುವ ಧಾರ್ಮಿಕ ಸಂಘಟನೆಯ/ಸಮುದಾಯದ ಸಭೆಯಲ್ಲಿ ಹಿಜಾಬ್/ಸ್ಕಾರ್ಫ್ ಬಗ್ಗೆ, ಮುಸ್ಲಿಂ ಕೋಮುವಾದದ ಬಗ್ಗೆ ಮುಸ್ಲಿಂ ಧರ್ಮ ಗುರುಗಳು ಮಾತನಾಡುವಂತೆಯೇ ಹಿಂದೂ ಧರ್ಮದ ಮಠಾಧಿಪತಿಗಳು, ಸಮುದಾಯದ ಗುರಿಕಾರರು ಧಾರ್ಮಿಕ ಸಭೆಗಳಲ್ಲಿ ಮಾತನಾಡುವಂತಾಗಬೇಕು.

ಜನವರಿ 26 ರಂದು ಮುಸ್ಲಿಂ ಸಮುದಾಯದ ಪ್ರಮುಖ ಸಂಘಟನೆಯಾದ ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಮಂಗಳೂರಿನ ದೇರಳಕಟ್ಟೆಯಲ್ಲಿ ಮಾನವ ಸರಪಳಿಯನ್ನು ಆಯೋಜಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಹಿರಿಕಿರಿಯರು, ಧರ್ಮಗುರುಗಳು, ಮಸೀದಿಗಳ ಮುಖ್ಯಸ್ಥರನ್ನು ಉದ್ದೇಶಿಸಿ ಧರ್ಮಗುರು ಝೈನುಲ್ ಅಬಿದೀನ್ ತಂಗಲ್, ಎಸ್ ಕೆ ಎಸ್ ಎಸ್ ಎಫ್ ನ ರಾಜ್ಯಾಧ್ಯಕ್ಷ ಉಸ್ತಾದ್ ಅನೀಸ್ ಕೌಸರಿ ಮಾತನಾಡಿದರು. ಇಬ್ಬರ ಮಾತುಗಳು ಇಡೀ ಮುಸ್ಲಿಂ ಸಮುದಾಯಕ್ಕೆ ನಿಜಕ್ಕೂ ದಿಕ್ಸೂಚಿಯಾಗಿದ್ದವು.

Contact Your\'s Advertisement; 9902492681

ಎಸ್ ಕೆ ಎಸ್ ಎಸ್ ಎಫ್ ನ ರಾಜ್ಯಾಧ್ಯಕ್ಷ ಉಸ್ತಾದ್ ಅನೀಸ್ ಕೌಸರಿ, ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಬೆಳಕು ಚೆಲ್ಲುತ್ತಾ, “ಉಡುಪಿ ಕಾಲೇಜಿನಲ್ಲಿ ನಿರಾಕರಿಸಲ್ಪಟ್ಟ ಹಿಜಾಬ್/ಸ್ಕಾರ್ಫ್ ಬಗ್ಗೆ ಮುಸ್ಲಿಂ ಧರ್ಮದ ಉಲೇಮಾಗಳು, ಧರ್ಮಗುರುಗಳು ಯಾಕೆ ಮಾತನಾಡುತ್ತಿಲ್ಲ ಎಂದು ಹಲವರು ನಮ್ಮನ್ನು ಕೇಳುತ್ತಿದ್ದಾರೆ. ಉಲೇಮಾಗಳು, ಧರ್ಮಗುರುಗಳು ಏನನ್ನು ಮಾತನಾಡಬೇಕೋ ಅದನ್ನಷ್ಟೇ ಮಾತನಾಡಬೇಕು.

ಒಂದು ಕ್ಯಾಂಪಸ್ನ ಒಳಗಡೆ ಯಾವುದೇ ಧರ್ಮದ ಧರ್ಮ ಗುರುಗಳಿಗೆ ಏನು ಕೆಲಸ ಇದೆ ? ಕ್ಯಾಂಪಸ್ ನ ಒಳಗಡೆ ಯಾವುದೇ ಸಮಸ್ಯೆಯಾದರೆ ಅದನ್ನು ಅಲ್ಲಿನ ವ್ಯವಸ್ಥೆಯ ಒಳಗಡೆಯೇ ಪರಿಹರಿಸಿಕೊಳ್ಳಬೇಕು. ಹೊರಗಿನ ಶಕ್ತಿಗಳಾದ ನಾವು ಅದಕ್ಕೆ ಕೈ ಹಾಕಿದರೆ ಶಾಲೆಯೊಳಗಿನ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಹಾಗಾಗಿ ಕ್ಯಾಂಪಸ್ ನೊಳಗೆ ಸ್ಕಾರ್ಫ್ ಬೇಕೇ ಬೇಡವೇ ಎಂಬ ವಿಷಯದ ಬಗ್ಗೆ ಬಾಹ್ಯ ಶಕ್ತಿಗಳು ಮಧ್ಯಪ್ರವೇಶ ಮಾಡಕೂಡದು” ಎಂದರು.

ಮತ್ತೂ ಮುಂದುವರೆದ ಉಸ್ತಾದ್ ಅನೀಸ್ ಕೌಸರಿ, “ಮುಸ್ಲಿಂ ಯುವಕರೇ, ನೀವು ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗಬೇಡಿ. ಕೈಯ್ಯಲ್ಲಿ ಕಲ್ಲು ಹಿಡಿಯಲಿಕ್ಕೂ, ನಿಮ್ಮ ಕೈಗೆ ಕಲ್ಲು ಕೊಡಲಿಕ್ಕೂ ಬಹಳ ಸುಲಭ. ಈ ರೀತಿ ನಿಮ್ಮ ಕೈಗೆ ಕಲ್ಲು ಕೊಡಲು ಹಲವರು ಕಾಯುತ್ತಿದ್ದಾರೆ. ಕಲ್ಲಿಗಿಂತಲೂ ನಿಮ್ಮ ಕೈಗೆ ಆಯುಧ ಕೊಡಲು ಬಹಳ ಸುಲಭ. ಆ ಪ್ರಚೋದನೆಗೆ ಒಳಗಾಗಿ ಕೈಯ್ಯಲ್ಲಿ ಕಲ್ಲು, ಆಯುಧ ಹಿಡಿದು ವಿಧ್ವಂಸಕ ಶಕ್ತಿಗಳಾಗಿ ಈ ಸಮುದಾಯದ ಒಳಗೆ ಇರಬೇಡಿ.

ಉಲಮಾ ನಾಯಕತ್ವ ಈ ರೀತಿಯ ಕೆಲಸಗಳಿಗೆ ಅನುಮತಿಸಿಲ್ಲ. ಇನ್ನು ಮುಂದೆಯೂ ಅನುಮತಿಸುವುದಿಲ್ಲ. ಕೋಮುವಾದ ಯಾರು ನಡೆಸಿದರೂ ಕೋಮುವಾದವೇ. ಅಲ್ಪಸಂಖ್ಯಾತರೂ ನಡೆಸಿದರೂ ಕೋಮುವಾದವೇ. ಬಹುಸಂಖ್ಯಾತರು ನಡೆಸಿದರೂ ಕೋಮುವಾದವೇ. ಬಹುಸಂಖ್ಯಾತರ ಕೋಮುವಾದವನ್ನು ಮಾತ್ರ ಹೇಳಿಕೊಂಡು ಅಲ್ಪಸಂಖ್ಯಾತರ ಕೋಮುವಾದದ ಬಗ್ಗೆ ನಾವು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಬಾರದು. ಆ ಪರಂಪರೆ ಸಮಸ್ತದ ನಾಯಕತ್ವಕ್ಕಿಲ್ಲ.

ಯಾರು ಕೋಮುವಾದ ನಡೆಸಿದರೂ ಅದನ್ನು ಕೋಮುವಾದ ಎಂದು ಘೋಷಿಸಿ ಅದನ್ನು ವಿರೋಧಿಸಲು ನಾವು ಸದಾ ಬದ್ಧರಾಗಿರಬೇಕು” ಎಂದರು. ಇದು ನಿಜವಾದ ಸೌಹಾರ್ಧತೆ ಬಯಸುವ ಮಾತುಗಳು. ಸೌಹಾರ್ಧತೆಯೆಂದರೆ ಮಾಧ್ಯಮಗಳಲ್ಲಿ ಬರುವಂತೆ, ಹಿಂದೂ ಸಮಾಜೋತ್ಸವಕ್ಕೆ ಪಾನಕ ವಿತರಿಸಿದ ಮುಸ್ಲೀಮರು, ಉಡುಪಿ ಪರ್ಯಾಯಕ್ಕೆ ಸಕ್ಕರೆ ಕೊಟ್ಟ ಮುಸ್ಲೀಮರಲ್ಲ.

ಹಿಂದೂ ಸಮುದಾಯದ ಕಾರ್ಯಕ್ರಮಗಳಲ್ಲಿ, ಜಾತಿ ಸಂಘಟನೆಯ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು, ಅರ್ಚಕರು, ಗುರಿಕಾರರು ಇದೇ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪ್ರಗತಿಪರರ ಸಮಾವೇಶಗಳಲ್ಲಿ, ಮುಸ್ಲೀಮರ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಮಾತನಾಡುವುದು ಸೌಹಾರ್ಧತೆಯ ಬಗ್ಗೆ ಮಾತನಾಡುವುದು ಸುಲಭ. ತನ್ನ ಸಮುದಾಯದೊಳಗೆ, ಧರ್ಮದೊಳಗೆ ಇಂತಹ ಚರ್ಚೆ ನಡೆಯುವಂತಾಗಬೇಕು. ಶಾಲಾ ಕಾಲೇಜು ವ್ಯವಸ್ಥೆಯಲ್ಲಿ ನಾವು ಕೈ ಹಾಕಲ್ಲ ಎಂದು ಮುಸ್ಲಿಂ ಧರ್ಮಗುರುಗಳು ಹೇಳಿದಂತೆ ಹಿಂದೂ ಸಮುದಾಯದ ಧರ್ಮಗುರುಗಳೂ ಅಭಿಪ್ರಾಯ ವ್ಯಕ್ತಪಡಿಸಬೇಕು.

ಕೋಮುವಾದಿಗಳಾಗಬೇಡಿ, ಪ್ರಚೋದನೆಗೆ ಒಳಗಾಗಿ ಕಲ್ಲು, ಆಯುಧ ಹಿಡಿಯಬೇಡಿ ಎಂದು ಉಸ್ತಾದರು ಕರೆ ಕೊಟ್ಟಂತೆ ಸ್ವಾಮೀಜಿಗಳು, ದೇವಸ್ಥಾನದ ಅರ್ಚಕರು, ತಂತ್ರಿಗಳು, ಗುರಿಕಾರರು ಕರೆಕೊಡಬೇಕು. ಮುಸ್ಲೀಮರ ಅತೀ ದೊಡ್ಡ ಸಂಘಟನೆಯಾದ ಎಸ್ ಕೆ ಎಸ್ ಎಸ್ ಎಫ್ ಮಾದರಿಯನ್ನು ಹಿಂದೂ ಧರ್ಮಿಯರು ಮುಂದುವರೆಸುವಂತಾಗಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here