ಗೋಕಾಕ : ‘ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹೊಡೆತ ಬೀಳುವುದು ನಿಶ್ಚಿತ ಎನ್ನುವುದನ್ನು ಅರಿತು ಕೇಂದ್ರ ಸರ್ಕಾರವು ರೈತ ವಿರೋಧಿಯಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.
ಇಲ್ಲಿನ ಅವರ ಗೃಹ ಕಚೇರಿ ‘ಹಿಲ್ ಗಾರ್ಡನ್’ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಗಾಂಧೀಜಿ ಫೋಟೊಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಉತ್ತರ ಪ್ರದೇಶದಲ್ಲಿ ಬಿಜೆಪಿ ಜನಪ್ರಿಯತೆ ಕುಸಿದಿರುವ ಬಗ್ಗೆ ತಿಳಿದು ಕಾಯ್ದೆಗಳನ್ನು ರದ್ದುಪಡಿಸಿದರೂ ಮತ್ತೆ ಕುತಂತ್ರ ನಡೆಸುವ ಮೂಲಕ ಬಿಜೆಪಿ ಸರ್ಕಾರ ಮತ್ತೆ ಮಾಡಬಹುದು. ಹೀಗಾಗಿ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.
‘ಮುಸ್ಲಿಮರನ್ನು ಕೆರಳಿಸುವ ಕೆಲಸ ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದಿದೆ. ಅದಕ್ಕೆ ಪ್ರತಿಕ್ರಿಯಿಸದೆ ಪರಿಶೀಲನೆ ನಡೆಸಬೇಕು. ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಸಮಯ ವ್ಯರ್ಥ ಮಾಡದೆ ಆರ್ಥಿಕವಾಗಿ ಪ್ರಗತಿ ಸಾಧಿಸಲು ನಿರಂತರ ಯತ್ನಗಳನ್ನು ಮುಂದುವರಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಬಿಜೆಪಿಯು ಸದಾ ಶ್ರೀಮಂತರ ಪರ ಕೆಲಸ ಮಾಡುತ್ತಿದೆ. ಹಿಂದುಳಿದವರು, ಅಲ್ಪಸಂಖ್ಯಾತರು ಆ ಪಕ್ಷದ ಕುತಂತ್ರಕ್ಕೆ ಬಲಿಯಾಗಬಾರದು. ಈ ಬಗ್ಗೆ 3-4 ದಿನಗಳ ತರಬೇತಿ ನೀಡಿ ಕಾಂಗ್ರೆಸ್‌ನಿಂದ ಜಾಗೃತಿ ಮೂಡಿಸಲಾಗುವುದು’ ಎಂದರು.
ಕಾಂಗ್ರೆಸ್ ಮುಖಂಡ ಆಶೋಕ ಪೂಜಾರಿ, ‘ಧರ್ಮ ಇದ್ದರೆ ಮಾತ್ರ ದೇಶ ಎನ್ನುವ ವಾತಾವರಣವನ್ನು ನಾವಿಂದು ಕಾಣುತ್ತಿದ್ದೇವೆ. ಇದು ಅಪಾಯಕಾರಿ ಬೆಳವಣಿಗೆ. ಇದನ್ನು ತಡೆಯಲು ಜನರು ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಕೋರಿದರು.
ಮುಖಂಡರಾದ ಪ್ರಕಾಶ ಹುಕ್ಕೇರಿ, ಯುವ ನಾಯಕ ರಾಹುಲ ಜಾರಕಿಹೊಳಿ, ಕಲ್ಪನಾ ಜೋಶಿ, ನಜೀರ ಶೇಖ್, ತನ್ವೀರ್ ಶೇಮಶೇರ್, ಅಮೀದ್ ನಾಡವಾಲೆ, ಇಮ್ರಾನ್ ತಪಕೀರ್, ಮುಂಜುರ್ ಶಮ್ಮಶೇರ, ಶಬ್ಬೀರ ಮುಜಾವರ, ಮೊಹಶೀನ ಖೋಜಾ, ತೌಫೀಕ್ ಮುಲ್ಲಾ, ತಬಸುಮ್ ಮುಲ್ಲಾ, ನಶೀಮಾ ಬುಡ್ಡನ್ನವರ, ಎಚ್.ಡಿ. ಮುಲ್ಲಾ, ಇಮ್ರಾನ್ ಶೇಖ, ತಾಹೀರ ಪೀರಜಾದೆ, ಆರೀಫ್ ಪೀರಜಾದೆ, ಪ್ರಕೃತಿ ದೊಡಮನಿ ಪಾಲ್ಗೊಂಡಿದ್ದರು.