ಸುರಪುರ: ಇಂದಿನ ಸಭೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳು ಅರ್ಜಿ ವಿಲೇವಾರಿಗೆ ಕ್ರಮವಹಿಸಿ,ಮುಂಬರುವ ಸಭೆಯೊಳಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳಿಗೆ ಸಂಬಂಧಿಸಿ ಮಾತನಾಡಿ,ಈ ಮುಂದೆ ಪ್ರತಿ ತಿಂಗಳು ಸಭೆಯನ್ನು ನಡೆಸಲಾಗುವುದು,ಅಧಿಕಾರಿಗಳು ಇಂದು ಸಲ್ಲಿಕೆಯಾಗಿರುವ ಅರ್ಜಿಗಳು ಆಯಾ ಇಲಾಖೆಗೆ ರವಾನಿಸಲಾಗುತ್ತದೆ,ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ಸಭೆಯೊಳಗೆ ಅರ್ಜಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಸಿ,ಒಂದು ವೇಳೆ ಸಾಧ್ಯವಾಗದ ಸಮಸ್ಯೆಗಳಿದ್ದರೆ ಅದಕ್ಕೆ ಕಾರಣ ತಿಳಿಸಿ ಹಿಂಬರ ನೀಡುವಂತೆ ತಿಳಿಸಿದರು.
ಇಂದಿನ ಸಭೆಯಲ್ಲಿ ಒಟ್ಟು ೭೦ ಅರ್ಜಿಗಳು ಸಲ್ಲಿಕೆಯಾಗಿದ್ದು ಅದರಲ್ಲಿ ಗಂಭೀರ ಸಮಸ್ಯೆಗಳ ಕುರಿತಾದ ಅರ್ಜಿಗಳನ್ನು ಬೇರೆಯಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಅಲ್ಲದೆ ಕಂದಾಯ ಇಲಾಖೆಯಲ್ಲಿ ಹೆಚ್ಚು ಸರ್ವೇಗೆ ಸಂಬಂಧಿಸಿದ ಅರ್ಜಿಗಳಿದ್ದು ಸಾವಿರಕ್ಕೂ ಹೆಚ್ಚು ಸರ್ವೇ ಅರ್ಜಿಗಳು ಬಾಕಿಯಿದ್ದು ಕಂದಾಯ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಸರ್ವೇಯರ್ ನೇಮಿಸಲು ಮನವಿ ಮಾಡುವುದಾಗಿ ತಿಳಿಸಿದರು.ಕಂದಾಯ ಮತ್ತು ಸಬ್ ರಿಜಿಸ್ಟ್ರಾರ್ ಇಲಾಖೆಯಲ್ಲಿ ಹೆಚ್ಚಿನ ಭ್ರಷ್ಟಾಚಾರದ ಮಾತುಗಳು ಕೇಳಿ ಬರುತ್ತಿವೆ,ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದರು.ಇನ್ನೂ ಅಂಗವಿಕರಿಗೆ ಗ್ರಾಮ ಪಂಚಾಯತಿ ಅನುದಾನದಲ್ಲಿ ಪ್ರತಿಶತ ೫ ರಷ್ಟು ಮೀಸಲಿರಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಅನೇಕ ಜನರು ಆಗಮಿಸಿ ಜೆಸ್ಕಾಂ ಇಲಾಖೆ,ಕಂದಾಯ ಇಲಾಖೆ,ನೀರಾವರಿ,ಉದ್ಯೋಗ ಖಾತ್ರಿ ಕೂಲಿ ಹಣ,ಆಶ್ರಯ ಮನೆ ಸೇರಿದಂತೆ ೭೦ ಅರ್ಜಿಗಳು ಸಲ್ಲಿಕೆಯಾದವು.ಇದೇ ಸಂದರ್ಭದಲ್ಲಿ ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಶಾಸಕರನ್ನು ಭೇಟಿ ಮಾಡಿ ತಹಸೀಲ್ ಕಚೇರಿಯಲ್ಲಿ ವಿದ್ಯುತ್ ಇಲ್ಲದಾಗ ಪಹಣಿ ಪಡೆಯಲು ತೊಂದರೆಯಿದೆ.ಆದ್ದರಿಂದ ಜನರೇಟರ್ ವ್ಯವಸ್ಥೆ ಹಾಗು ಪಹಣಿ ವಿತರಣೆಗೆ ಮತ್ತು ಆಧಾರ ಕಾರ್ಡ್ ಮಾಡಿಕೊಡಲು ಇನ್ನೊಂದು ಕೌಂಟರ್ ಆರಂಭಿಸುವಂತೆ ಮತ್ತು ನಗರಸಭೆಯಲ್ಲಿ ಕೆಲಸಗಳು ವಿಳಂಭವಾಗುತ್ತಿದ್ದು ಕ್ರಮಕ್ಕೆ ಮನವಿ ಮಾಡಿದರು.
ವೇದಿಕೆ ಮೇಲೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಹುಣಸಗಿ ತಹಸೀಲ್ದಾರ್ ಅಶೋಕ ಸುರಪುರಕರ್,ತಾ.ಪಂ ಇಒ ಅಮರೇಶ ಮೂಡಲದಿನ್ನಿ ಹಾಗು ಸಭೆಯಲ್ಲಿ ಟಿಹೆಚ್‌ಒ ಡಾ:ಆರ್.ವಿ.ನಾಯಕ,ನಗರಸಭೆ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿ,ಬಿಇಒ ಮಹಾದೇವರಡ್ಡಿ,ಅಕ್ಷರದಾಸೋಹ ಎಡಿ ಮೌನೇಶ ಕಂಬಾರ,ಸಿಡಿಪಿಒ ಲಾಲಸಾಬ್ ಪೀರಾಪುರ,ಸಮಾಜ ಕಲ್ಯಾಣ ಇಲಾಖೆ ಎಡಿ ಸತ್ಯನಾರಾಯಣ ದರಬಾರಿ,ಬಿಸಿಎಮ್ ಅಧಿಕಾರಿ ತಿಪ್ಪಾರಡ್ಡಿ ಸೇರಿದಂತೆ ಎಲ್ಲಾ ಇಲಾಖೆಗಳು ಅಧಿಕಾರಿಗಳು ಹಾಜರಿದ್ದರು.