ಸುರಪುರ: ಪುರಂದರದಾಸರು ಶ್ರೀಕೃಷ್ಣನ ಮಹಾನ್ ಭಕ್ತರಾಗಿದ್ದು ಕವಿಗಳು ಹಾಗೂ ಸಂಗೀತಗಾರರಾಗಿದ್ದರು ಅವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ಪರಿಗಣಿಸಲಾಗುತ್ತದೆ ಎಂದು ಶ್ರೀ ವೇಣುಗೋಪಾಲ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ರಾಧಾಬಾಯಿ ಕೃಷ್ಣಭಟ್ ಜೋಷಿ ಮಾತನಾಡಿದರು.
ನಗರದ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೇಣುಗೋಪಾಲ ಮಹಿಳಾ ಭಜನಾ ಮಂಡಳಿ ವತಿಯಿಂದ ಕರ್ನಾಟಕ ಸಂಗೀತ ಪಿತಾಮಹ ದಾಸಶ್ರೇಷ್ಠರೆನ್ನಿಸಿಕೊಂಡಿರುವ ಪುರಂದರದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತಮ್ಮ ಜೀವನದಲ್ಲಿ ಆದ ಘಟನೆಯ ನಂತರ ತಮ್ಮ ಎಲ್ಲಾ ಸಂಪತ್ತನ್ನು ತ್ಯಜಿಸಿ ಈ ಮೊದಲು ಶ್ರೀನಿವಾಸ ನಾಯಕ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಅವರು ವ್ಯಾಸರಾಜರ ಶಿಷ್ಯರಾಗಿ ಪುರಂದರದಾಸರಾದರು.
ಪಂಡರಪುರ ವಿಠಲ ಪರಮ ಭಕ್ತರಾಗಿದ್ದ ಅವರು ಮುಂದೆ ಪುರಂದರ ವಿಠಲ ಎಂಬ ನಾಮಾಂಕಿತದ ಮೂಲಕ ಕನ್ನಡದಲ್ಲಿ ತುಂಬಾ ಸರಳವಾಗಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಸಂಗೀತಕ್ಕೆ ಹೊಂದಿಸಿದ ಹಾಡುಗಳು ಹಾಗೂ ಕೀರ್ತನೆಗಳನ್ನು ರಚಿಸಿದರು ತಮ್ಮ ಹಾಡುಗಳಲ್ಲಿ ಶ್ರೀಕೃಷ್ಣನ ಜೀವನದ ವಿವಿಧ ಅಂಶಗಳನ್ನು ಹಾಗೂ ಸಮಾಜದಲ್ಲಿ ಚಾಲ್ತಿಯಲ್ಲಿರುವ ವಿವಿಧ ಆಡಂಬರಗಳು ಮತ್ತು ದುರ್ಗಣಗಳನ್ನು ತಮ್ಮ ರಚನೆಗಳಲ್ಲಿ ವಿಡಂಬನಾತ್ಮಕವಾಗಿ ಚಿತ್ರಿಸಿ ಸಮಾಜಕ್ಕೆ ಎಲ್ಲರ ಬದುಕಿಗೆ ಉತ್ತಮ ದಾರಿ ತೋರಿಸಿಕೊಟ್ಟ ಮಹಾನುಭಾವರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಪುರಂದರದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸದಸ್ಯರಿಗೆ ಹರಿಕಥಾಮೃತಸಾರ ಪಾರಾಯಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ನೀಡಲಾಯಿತು ನಂತರ ಪುರಂದರದಾಸರ ಹಾಡುಗಳ ವಿಶೇಷ ಭಜನೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸದಸ್ಯರಾದ ಉಷಾ ಕುಲಕರ್ಣಿ, ವಿಜಯಲಕ್ಷ್ಮೀ ಜೋಷಿ, ಅಂಜನಾಬಾಯಿ ಕುಲಕರ್ಣಿ ಉಳ್ಳೆಸೂಗುರು, ದೇವಕಿಬಾಯಿ ಕುಲಕರ್ಣಿ ಹೆಮನೂರು, ಸುನಂದಾ ದೇಶಪಾಂಡೆ, ವಿನೋದಾ ಭಟ್, ಉಜ್ವಲಾ ಭಟ್, ರಾಧಾ ದೇವಡಿ, ಸುರೇಖಾ ಕುಲಕರ್ಣಿ, ಮಹಾಲಕ್ಷ್ಮೀ, ಶಾರದಾ ಕುಲಕರ್ಣಿ, ರೇಖಾ, ರಾಜಲಕ್ಷ್ಮೀ ಇತರರಿದ್ದರು.