ಪ್ರಾಮಾಣಿಕ ಪ್ರಯತ್ನ ಮಾಡುವವರಿಗೆ ಸಾಧನೆ ಕೈ ಬೀಸಿ ಕರೆಯುತ್ತದೆ: ಅರುಣಕುಮಾರ ಕಿಣ್ಣಿ

0
86

ಕಲಬುರಗಿ: ಸಾಧನೆಯ ಶಿಖರವೆ ಹಾಗೆ ಇರುತ್ತದೆ, ಸದಾ ಸ್ಫೂರ್ತಿದಾಯಕವಾಗಿ, ಕಠಿಣ ಪರಿಶ್ರಮದಿಂದ, ಪ್ರಾಮಾಣಿಕ ಪ್ರಯತ್ನ ಮಾಡುವವರಿಗೆ ಕೈ ಬೀಸಿ ಕರೆಯುತ್ತದೆ ಎಂದು ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ ಹೇಳಿದರು.

ಇಂದು ಬೆಳಿಗ್ಗೆ ಶರಣಬಸವೇಶ್ವರ ದೇವಸ್ಥಾನ ಹತ್ತಿರವಿರುವ ಶರಣ ಕಂಪ್ಯೂಟರ್ ತರಬೇತಿ ಕೇಂದ್ರದ ಆವರಣದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಹಾಗೂ ಶರಣ ಕಂಪ್ಯೂಟರ್ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನು ಹತ್ತದೆ ಒಳ್ಳೆಯ ಸಮೃದ್ಧ ಸಮಾಜ ಕಟ್ಟುವುದರೊಂದಿಗೆ ನಾಡಿನ ಸೇವೆಗೈಯುತ್ತಾ ಉತ್ತಮ ಪ್ರಜೆಯಾಗಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿಯಿಟ್ಟು ಮುಂದುವರಿದರೆ ತಮ್ಮ ಜೀವನದಲ್ಲಿ ಬರುವ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮಕ್ತಂಪೂರದ ಗುರುಬಸವೇಶ್ವರ ಮಠದ ಪೂಜ್ಯರಾದ ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ಮಾತನಾಡುತ್ತಾ ಇಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡಿದರೆ ನಮಗೇನು ಲಾಭ? ಎನ್ನುವ ಸಂದರ್ಭದಲ್ಲಿ ಈ ಸಂಘವು ಹಲವಾರು ರಚನಾತ್ಮಕ, ಜನಪರ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಸಜ್ಜನರ ಸಂಘವಾಗಿದೆ ಎಂದು ಹೇಳಿದರು. ಈ ಸಂಘವು ವಿದ್ಯಾರ್ಥಿಗಳ, ನೊಂದ ಜನರ, ದಿನ ದಲಿತರ ಆಶಾಕಿರಣವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್, ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ವಿರುಪಾಕ್ಷ ಶಾಸ್ತ್ರಿ, ಕೊಪ್ಪಳದ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ನಾಗರಾಜ ಹೆಬ್ಬಾಳ, ಹಿರಿಯ ಶರಣ ಚಿಂತಕರಾದ ಶ್ರೀಮತಿ ಸುಮಿತ್ರಾಬಾಯಿ ಎಸ್. ಮಠ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿಯಾಗಿರುವ ನ್ಯಾಯವಾದಿ ನಂದೀಶ್ವರ ಜೆ. ಪಾಟೀಲ ವಹಿಸಿದ್ದರು.

ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ರವಿಕಿರಣ ಕೊಡ್ಲೆ, ಮಾಣಿಕ ಬಿರಾದಾರ, ಅಭಿಷೇಕ ಪಾಣೆಗಾಂವ, ಚೈತ್ರ ಮುತ್ತಗಿ, ಸಾವಿತ್ರಿ ಶ್ರೀಚಂದ್, ವಿಜಯಲಕ್ಷ್ಮೀ ಎಸ್. ದಂಡಿನ ಸೇರಿದಂತೆ ೪೫ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಜಿಲ್ಲಾ ಖಜಾಂಚಿಯಾಗಿ ಆಯ್ಕೆಯಾದ ಸಾಯಬಣ್ಣ ಬೆಳಮ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದ ನಂತರ ಈ ಭಾಗದ ಹೆಸರಾಂತ ಕಲಾವಿದರಿಂದ ಕಲಾ ಸಂಭ್ರಮವಾಯಿತು.

ಕಲಾವಿದರಾದ ಶ್ರವಣಕುಮಾರ ಮಠ, ಹಾಸ್ಯಕಲಾವಿದ ಗುಂಡಣ್ಣ ಡಿಗ್ಗಿ, ಜೂನಿಯರ್ ರಾಜಕುಮಾರ ಹೇಮಂತ ಮಾಲಗತ್ತಿ, ಜಾನಪದ ಕಲಾವಿದ ರಾಜು ಹೆಬ್ಬಾಳ, ಮಲ್ಲಿಕಾರ್ಜುನ ಕುಮಸಿ, ಶಿವಕುಮಾರ ಸ್ವಾಮಿ, ಮಲಕಾರಿ ಪೂಜಾರಿ, ಮಹೇಶ ತೇಲಕುಣಿ, ಬಸವರಾಜ ವಾಲಿ ಇವರಿಂದ ಹಾಸ್ಯ ಸಂಗೀತ ರಸಮಂಜರಿ ಜರುಗಿತು.
ಸಂಗಮೇಶ ಶಾಸ್ತ್ರೀ ಮಾಶಾಳ ಪ್ರಾರ್ಥಿಸಿದರು, ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಜಕುಮಾರ ಪಾಟೀಲ ನಿರೂಪಿಸಿದರು. ಶರಣು ಜೆ. ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ರಘುನಂದನ ಕುಲಕರ್ಣಿ, ರಾಜಶೇಖರ ಪಾಟೀಲ, ನಾಗೇಂದ್ರಯ್ಯ ಮಠ, ನ್ಯಾಯವಾದಿಗಳಾದ ಗಣಪತಿ ಕೊಡ್ಲೆ, ಶಿವಯ್ಯ ಹಿರೇಮಠ, ಎಸ್.ಎಸ್.ಚೌಡಗುಂಡ, ಭರತ ಮಠ, ಜಗದೀಶ ಪಾಟೀಲ ಬಾಗೋಡಿ ಹಾಗೂ ಶಿವಕುಮಾರ ಗಣಜಲಖೇಡ, ಆನಂದ ಖೇಳಗಿ, ಶರಣು ಕಲ್ಮಠ, ಚನ್ನವೀರ ಮಠ, ರಜನಿಕಾಂತ ಬರೂಡೆ, ಗೌಡೇಶ ಬಿರಾದಾರ, ಕಮಲಾಬಾಯಿ ಜೆ. ಪಾಟೀಲ, ಜಯಶ್ರೀ ಶ್ರೀಚಂದ್, ರಾಜಶ್ರೀ ಟೆಂಗಳಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here