ವಾಡಿ: ಧರ್ಮ ದ್ವೇಷಾಗ್ನಿ ಹೊತ್ತಿ ಉರಿಯುತ್ತಿರುವ ಕರುನಾಡಿನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಯುಗಾದಿ ಹಬ್ಬದ ಬೇವು-ಬೆಲ್ಲ ಕಷಾಯ ಸವಿಯುವ ಮೂಲಕ ಕೋಮು ಸೌಹಾರ್ದತೆ ಮೆರೆದ ಪ್ರಸಂಗಗಳು ಕಂಡು ಬಂದವು.
ಸೂಫಿ ಸಂತ ಶರಣರ ನಾಡಾದ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಹಿಂದುಗಳು ಮುಸಲ್ಮಾನ ಸ್ನೇಹಿತರನ್ನು ಪ್ರೀತಿಯಿಂದ ಮನೆಗೆ ಆಹ್ವಾನಿಸಿ ಹಬ್ಬದ ಸಿಹಿಯೂಟ ಬಡಿಸಿದರು. ಮುಸ್ಲಿಮರು ರಂಜಾನ್ ಹಬ್ಬದಂದು ಹಿಂದುಗಳಿಗೆ ಸುರ್ಕುಂಭ ಕಷಾಯ ನೀಡಿ ಸೌಹಾರ್ದತೆ ಮೆರೆಯುವಂತೆ, ಹೊಸ ವರ್ಷ ಯುಗಾದಿ ಹಬ್ಬದ ಪ್ರಯುಕ್ತ ಹಿಂದುಗಳು ಧರ್ಮ ಬೇಧ ಮರೆತು ಮುಸ್ಲಿಂ ಸ್ನೇಹಿತರನ್ನು, ವ್ಯಾಪಾರದ ಸಹಪಾಟಿಗಳನ್ನು, ಬಡಾವಣೆಯ ನಿವಾಸಿಗಳನ್ನು ಮನೆಗೆ ಕರೆದು ಕುಟುಂಬ ಸದಸ್ಯರಂತೆ ಪ್ರೀತಿಯನ್ನು ತೋರುವ ಮೂಲಕ ವಿವಿದ ಹಣ್ಣುಗಳ ಮಿಶ್ರಣದಿಂದ ತಯಾರಿಸಲಾದ ಬೇವು-ಬೆಲ್ಲದ ಕಷಾಯವನ್ನು ಕುಡಿಯಲು ಕೊಟ್ಟು ಮನುಷ್ಯ ಪ್ರೀತಿ ಮೆರೆದರು.
ಪರಸ್ಪರ ಹಬ್ಬದ ಶುಭಾಶಯಗಳನ್ನು ಹೇಳಿ ಖುಷಿಪಟ್ಟರು. ಯುಗಾದಿ ಹಬ್ಬದ ದಿನವಾದ ಶನಿವಾರ ಚಿತ್ತಾಪುರ, ವಾಡಿ, ಕುಃದನೂರ, ನಾಲವಾರ, ಲಾಡ್ಲಾಪುರ, ಹಳಕರ್ಟಿ, ಚಾಮನೂರ, ಕೊಲ್ಲೂರ ಸೇರಿದಂತೆ ಇಡೀ ದಿನ ಹಿಂದು-ಮುಸ್ಲಿಮರು ಯುಗಾದಿ ಹಬ್ಬದೂಟ ಸವಿದರು.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ಬಸವರಾಜ ಶೆಟಗಾರ, ಕಾಶೀನಾಥ ಶೆಟಗಾರ ಅವರು ತಮ್ಮ ಆತ್ಮೀಯ ಗೆಳೆಯ ಶೇಖ ಮಹೆಬೂಬ ಅವರನ್ನು ಮನೆಗೆ ಆಹ್ವಾನಿಸಿ ಬೇವು ಬೆಲ್ಲದ ಕಷಾಯ ವಿತರಿಸಿದರು.
ಹಿಂದು ಮುಸ್ಲಿಮರ ಸ್ನೇಹ ಸೌಹಾರ್ದತೆಗೆ ಧರ್ಮದ ಯಾವೂದೇ ಗೋಡೆಗಳು ಅಡಚಣೆ ಮಾಡಲಿಲ್ಲ. ಮಾನವ ಧರ್ಮಕಿಂತ ಶ್ರೇಷ್ಠ ಧರ್ಮ ಮತ್ತೊಂದಿಲ್ಲ ಎಂಬ ಸಂದೇಶ ಸಾರಿದ್ದು, ಕೋಮುವಾದಿಗಳಿಗೆ ಪಾಠ ಕಲಿಸಿದಂತಿತ್ತು.