ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ರಾಮಲಿಂಗೇಶ್ವರರ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಕಾಳಿಕಾದೇವಿ ಮತ್ತು ರಾಮಲಿಂಗೇಶ್ವರರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಪೇಠ ಅಮ್ಮಾಪುರ ಗ್ರಾಮದಲ್ಲಿ ಭಾನುವಾರ ಅದ್ಧೂರಿಯಾದ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರ ಕುಂಭ ಕಳಸಗಳ ಮೆರವಣಿಗೆ ಜೊತೆಗೆ ಪುರವಂತರ ಮಹಾಸೇವಾ ನೋಡುಗರ ಆಕರ್ಷಿಸುವಂತಿತ್ತು. ರಾಮಲಿಂಗೇಶ್ವರರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಜಾಲಿಬೆಂಚಿ ಕ್ರಾಸ್ ಬಳಿಯಲ್ಲಿನ ರಾಮಲಿಂಗೇಶ್ವರರ ಮಠದ ವರೆಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಲಕ್ಷ್ಮೀಪುರ ಬಿಜಾಸಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,ವೀರಯ್ಯ ಮಹಾಸ್ವಾಮೀಜಿ ವಡಿಗೇರಿ,ಗೂಳಿ ಮೋನಯ್ಯ ತಾತಾ ಕೈಲಾಸಕಟ್ಟಿ ತಿಂಥಣಿ ಹಾಗೂ ಶ್ರೀ ಮಠದ ರಾಮಶರಣರು ಸೇರಿದಂತೆ ಪೇಠ ಅಮ್ಮಾಪುರ ಗ್ರಾಮದ ನೂರಾರು ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.