ಆಳಂದ: ಸಂಘಟಿತ ಹೋರಾಟದ ಮೂಲಕ ಕಾರ್ಮಿಕರು ತಮ್ಮ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪೂರೆ ಅವರು ಹೇಳಿದರು.
ಪಟ್ಟಣದ ಭೀಮನಗರದಲ್ಲಿ ಸ್ಥಳೀಯ ಕಾರ್ಮಿಕ ಕಲ್ಯಾಣ ಸಮಿತಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಕಾರ್ಮಿಕರ ಮೇಲೆ ಬಂಡವಾಳ ಶಾಹಿಗಳ ದಬ್ಬಾಳಿಕೆ ಮತ್ತು ಶೋಷಣೆ ವಿರುದ್ಧ ಡಾ| ಬಿ.ಆರ್. ಅಂಬೇಡ್ಕರ್ ಅವರು ಅನೇಕ ಹೋರಾಟವನ್ನು ಮಾಡಿ ಕಾರ್ಮಿಕರಿಗೆ ಅನುಕೂಲವಾಗುವ ಕಾನೂನುಗಳನ್ನು ರಚಿಸಿದ್ದಾರೆ. ೧೨ ಗಂಟೆ ಕೆಲಸದ ಬದಲು ಎಂಟು ಘಂಟೆ ಕೆಲಸ ಮಾಡಬೇಕು. ರಜೆಯ ಸೌಲಭ್ಯ, ಆಸ್ಪತ್ರೆಗಳ ಚಿಕಿತ್ಸೆ ಸೌಲಭ್ಯ ಮಹಿಳೆಯರ ಹೆರಿಗೆ ರಜೆಯಂತ ಸೌಲಭ್ಯಗಳನ್ನು ನೀಡುವ ಕುರಿತು ಸಂವಿಧಾನದಲ್ಲಿ ಹಕ್ಕು ನೀಡಿದ್ದಾರೆ. ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಕಾನೂನಿನ ಮೂಲಕ ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳಲು ಸಂಘಟನೆ, ಶಿಕ್ಷಣ ಮತ್ತು ಹೋರಾಟಕ್ಕೆ ಮುಂದಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಶ್ರೇಷ್ಟವಾಗಿದೆ. ಇವರನ್ನು ಪ್ರ್ರೀತಿ ಗೌರವದಿಂದ ಕಂಡು ಗೌರವಿಸುವದನ್ನು ರೂಢಿಸಿಕೊಳ್ಳಬೇಕು ಎಂದರು.
ಬೆಳಮಗಿ ಬುದ್ಧ ವಿವಾಹರ ಬಂತೇ ಅಮರಜೋತಿ ಅವರು ಮಾತನಾಡಿ, ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಅವರ ಸನ್ಮಾನಿಸುವ ಶ್ಲಾಘನೀಯ ಕಾರ್ಯಮಾಡಿದ್ದಾರೆ, ಅನ್ನ ಬೆಳೆಯುವ ರೈತ, ಗಡಿ ಕಾಯುವ ಸೈನಿಕ ಮತ್ತು ಊರು ಸ್ವಚ್ಛ ಮಾಡುವ ಪೌರಕಾರ್ಮಿಕರ ಶ್ರೇಷ್ಠಕಾರ್ಯಕ್ಕೆ ಗೌರವಿಸುವ ಕಾರ್ಯವನ್ನು ಎಲ್ಲಡೆ ನಡೆಯಬೇಕು ಎಂದರು.
ವೇದಿಕೆಯ ಮೇಲೆ ಮಕ್ಕಳ ವೈದ್ಯ ಡಾ. ನಿಖಿಲ ಶಾಹಾ, ಅಂಗನವಾಡಿ ಮೇಲ್ವಿಚಾರಕಿ ಭಾಗಿರಥಿ ಎಂ. ಯಲ್ಲಶೆಟ್ಟಿ, ಪ್ರಾಂತ ರೈತ ಸಂಘದ ಪಾಂಡುರಂಗ ಮಾವೀನಕರ್, ಜಿಲ್ಲಾ ದಲಿತ ಸಮನ್ವಯ ಸಮಿತಿ ಸುಧಾಮ ಧನ್ನಿ, ಭೀಮನಗರದ ಶಾಮರಾವ್ ಸಾಲೇಗಾಂವ, ಪುರಸಭೆ ಸದಸ್ಯ ಲಕ್ಷ್ಮಣ ಝಳಕಿ, ಮುತ್ತಣ್ಣಾ ಸಾಲೇಗಾಂವ, ಅಪ್ಪಸಾಬ ತೀರ್ಥೆ, ಜಯಭೀಮ ದೊಡ್ಡಿ, ಸೂರ್ಯಕಾಂತ ಸಾಲೇಗಾಂವ, ಮಲ್ಲಿಕಾರ್ಜುನ ಮಂಟಗಿಕರ್, ಆನಂದರಾವ ಯಲಶಟ್ಟಿ, ಲಕ್ಷ್ಮಣ ಮುದಗಲೆ, ದಯಾನಂದ ಸಾಲೇಗಾಂವ, ಅನೀಲ ಯಲಶೆಟ್ಟಿ, ಸತೀಶ ಮೊದಲೆ ಪ್ರಥ್ವಿರಾಜ ಮೊದಲೆ ಲಕ್ಷ್ಮೀಕಾಂತ ತೋಳೆ, ಮಡಿವಾಳಪ್ಪ ಯಲಶೆಟ್ಟಿ ಮತ್ತಿತರು ಇದ್ದರು.
ಸಮಿತಿಯ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿದರು. ಅಣ್ಣಾರಾವ್ ಪಾಟೀಲ ಸ್ವಾಗತಿಸಿದರು. ಮಡಿವಾಳಯ್ಯ ಮಠಪತಿ ನಿರೂಪಿಸಿದರು. ವಿಕ್ರಮ ಅಷ್ಟಗಿ ವಂದಿಸಿದರು. ಕಾರ್ಮಿಕ ಗೀತೆ ಕಲಾವಿದ ಕಾಶಿನಾಥ ಬಿರಾದಾರ, ಕಲ್ಯಾಣಿ ತುಕಾಣಿ ಹಾಡಿದರು.