ಕಲಬುರಗಿ: ಮನುಷ್ಯನು ಸಂಘ ಜೀವಿ. ತಾನು ಯಾವಾಗಲೂ ಇನ್ನೊಬ್ಬರ ಸಹವಾಸದಲ್ಲಿ ಇರುತ್ತಾನೆ. ಹೀಗಿರುವಾಗ ದುಷ್ಟ ದುರ್ಜನರ ಸಂಘವನ್ನು ತೊರೆದು ಶಿಷ್ಠ ಸಜ್ಜನರ ಸಹವಾಸದಲ್ಲಿದ್ದರೆ ಅವನಿಗೆ ಸರ್ವಾರ್ಥ ಸಿದ್ಧಿಯಾಗುವುದು ಎಂದು ಶ್ರೀಮದ್ ಕಾಶಿ ಜಗದ್ಗುರು ಡಾ. ಚಂದ್ರಶೇಖರ್ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಆಷಾಢ ಮಾಸದ ನಿಮಿತ್ಯ ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಜ್ಜನರ ಸಹವಾಸದಿಂದ ಮನುಷ್ಯ ಸನ್ಮಾರ್ಗದಲ್ಲಿ ನಡೆಯುವನು. ಅಂದಾಗ ಅವನಿಗೆ ದುರ್ಗತಿ ಬರಲು ಸಾಧ್ಯವಿಲ್ಲ. ಜೊತೆಗೆ ಸಜ್ಜನರ ಉಪದೇಶವನ್ನು ನಿರಂತರ ಕೇಳುವುದರಿಂದ ಅವನ ಬುದ್ಧಿಯಲ್ಲಿ ಜಡತ್ವವು ನಿವಾರಣೆಯಾಗುವುದು ಎಂದರು.
ಶ್ರೀ ಕಾಶಿ ಜಗದ್ಗುರುಗಳ ಸಾರೋಟ ಮೆರವಣಿಗೆ ಗಂಜ ಹನುಮಾನ್ ಮಂದಿರದಿಂದ ಪ್ರಾರಂಭಗೊಂಡು ಚೌಕ್ ಮುಖಾಂತರ ಸುಮಂಗಲೆಯರ ಕಳಸ ವಾದ್ಯ ವೃಂದಮೇಳದೊಂದಿಗೆ ಹೊರಟು ಕಲ್ಯಾಣ ಮಂಟಪದಲ್ಲಿ ಬರ ಮಾಡಿಕೊಳ್ಳಲಾಯಿತು. ಆನೆ ಮೇಲೆ ಕುಳಿತ ಆಲಮೇಲ್ ಶ್ರೀಗಳು, ವೃದ್ಧರು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗುರುಲಿಂಗಯ್ಯಸ್ವಾಮಿ ಹಿತ್ತಲಶಿರೂರ್ ಅವರಿಂದ ಸಂಗೀತ ಸೇವೆ ಜರುಗಿತು. ಡಾ. ಶಿವಶರಣಪ್ಪ ಸರಸಂಬಾ ಅವರು ಕಾರ್ಯಕ್ರಮ ನಿರೂಪಿಸಿದರು.