ಕಲಬುರಗಿ : ಹಿಂದುಳಿದ ಸಂವಿಧಾನದ ೩೭೧ನೇ(ಜೆ) ಕಲಂ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬಲಿಷ್ಠ ಪಕ್ಷಾತೀತವಾದ ರಾಜಕೀಯೇತರ ಸಂಘಟನೆ ಪ್ರಸ್ತುತ ದಿನಗಳಲ್ಲಿ ಅತಿ ಅವಸ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದರು.
೦೮. ರಂದು ಕಟ್ಟಡ ಕಾರ್ಮಿಕರ ಕಚೇರಿಯಲ್ಲಿ ಸಮಾಲೋಚನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ದಿನೆ ದಿನೆ ಅಭಿವೃದ್ಧಿ ಕೆಲಸಗಳು ಕುಂಟಿತವಾಗುತ್ತಿವೆ. ಸರಕಾರ ಈ ಪ್ರದೇಶಕ್ಕೆ ತನ್ನ ಮಲತಾಯಿ ಧೋರಣೆ ನೀತಿಯನ್ನು ಮುಂದುವರೆಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಅಭಿವೃದ್ಧಿಗೆ ಹೋರಾಟವೇ ಏಕ ಮಾತ್ರ ಮಾನದಂಡವಾಗಿದೆ ಎಂದು ಹೇಳಿದರು. ಮುಂದುವರೆದು ಅವರು ಕರ್ನಾಟಕ ರಾಜ್ಯದಲ್ಲಿ ಆಡಳಿತಕ್ಕೆ ಬರುವ ಎಲ್ಲಾ ಪಕ್ಷದ ಸರಕಾರಗಳು ರಾಜಾರೋಷವಾಗಿ ನಿರ್ಲಕ್ಷತನ, ಮಲತಾಯಿ ಧೋರಣೆ ನಡೆಸುತ್ತಿರುವುದು ಖೇದಕರವಾದ ಸಂಗತಿಯಾಗಿದೆ. ಅತ್ಯಂತ ಹಿಂದುಳಿದ ಪ್ರದೇಶವೆಂಬ ಕಾರಣಕ್ಕೆ ೩೭೧ನೇ(ಜೆ) ಕಲಂ ತಿದ್ದುಪಡಿಯಾದರೂ ಸಹ ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಸರಕಾರ ರಾಜಕೀಯ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಪ್ರತಿಯೊಂದು ವಿಷಯಕ್ಕೂ ಹೋರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ.
ದತ್ತಾತ್ರೇಯ ಪಾಟೀಲ ರೇವೂರಗೆ ರವಿ ಬಿರಾದಾರ ಸನ್ಮಾನ
ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತೀ ಹೆಚ್ಚು ಜನ ಅಸಂಘಟಿತ ಕಾರ್ಮಿಕರು ನೆಲೆಸಿದ್ದಾರೆ. ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಸರಕಾರ ಹಮ್ಮಿಕೊಂಡ ಯೋಜನೆಗಳು ಕಾರ್ಮಿಕರತನಕ ಮುಟ್ಟಿಸುವ ಕೆಲಸ ಕಾರ್ಮಿಕ ಇಲಾಖೆ ಮಾಡದೇ ನಿರ್ಲಕ್ಷಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರದ ಕಾರ್ಮಿಕರು ಒಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವ್ಯವಸ್ಥಿತ ಸಂಘಟನೆ ಕೈಗೊಳ್ಳುವುದು ಅತಿ ಅವಶ್ಯವಾಗಿದ್ದು, ಈ ಬಗ್ಗೆ ಆಯಾ ಸಂಘಟನೆಯ ಮುಖಂಡರು ವೈಯುಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ತು ಸಂಘಟಿತರಾಗಲು ಕರೆ ನೀಡಿದರು.
ಸಭೆಯಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಭೀಮರಾಯ ಕಂಗದಳ್ಳಿ, ಪದಾಧಿಕಾರಿಗಳಾದ, ಮರೆಪ್ಪ ರೊಟ್ನಡಗಿ, ಬಾಬುರಾವ, ದೇವೇಂದ್ರ, ಮುಖಂಡರಾದ, ಅಬ್ದುಲ ರಹೀಮ್, ಸಂತೋಷ ಜವಳಿ, ಅಸ್ಲಂ ಚೌಂಗೆ, ಚಂದ್ರಕಾಂತ, ಮಲ್ಲಿಕಾರ್ಜುನ, ಜಗದೇವಿ ಹೆಗಡೆ ಸಿದ್ದು ಪೂಜಾರಿ ಸೇರಿದಂತೆ ಅನೇಕರು ಮಾತನಾಡಿದರು. ಈ ಸಭೆಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.