- ಕೆ.ಶಿವು.ಲಕ್ಕಣ್ಣವರ
ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದೆನಿಸಿರುವ ಬುದ್ಧ ಪೂರ್ಣಿಮಾ ಇದೇ ಸೋಮವಾರ, ಇದೇ ಮೇ 16 ರಂದೇ ಇದೆ.
ಇದನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.
ಇದು ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಹುಣ್ಣಿಮೆ ದಿನವಾಗಿದೆ.
ಶ್ರದ್ಧಾ ಭಕ್ತಿಗಳಿಂದ ಈ ವಿರಾಗಿಯನ್ನು ಸ್ಮರಿಸಲಾಗಿದೆ. ಭಗವಾನ್ ಗೌತಮ್ ಬುದ್ಧನ 2584ನೇ ಜನ್ಮ ದಿನಾಚರಣೆ ಮಹೋತ್ಸವವನ್ನು ಭಕ್ತಿ ಶ್ರದ್ಧೆ, ಧ್ಯಾನದಿಂದ ದೇಶದ ವಿವಿಧೆಡೆ ಸೋಮವಾರ ಆಚರಿಸಲಾಗುತ್ತದೆ.
ಭಾರತ, ನೇಪಾಳ ಹಾಗೂ ಶ್ರೀಲಂಕಾದಲ್ಲಿ ಪ್ರಮುಖವಾಗಿ ಬುದ್ಧ ಜಯಂತಿ ಆಚರಣೆ ಜೋರಾಗಿರುತ್ತದೆ..!
ಮೇ 16 ರಂದು ಗೌತಮ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. 2019 ರಲ್ಲಿ ಪುನರಾಯ್ಕೆಯಾದ ನಂತರ ಪ್ರಧಾನಿ ಮೋದಿಯವರ ಮೊದಲ ನೇಪಾಳ ಭೇಟಿ ಇದಾಗಿದೆ. ಬುದ್ಧ ಪೂರ್ಣಿಮೆಯ ಬಗ್ಗೆ ನಾವು ತಿಳಿದುಕೊಳ್ಳಬೇಕಾದದ್ದು ಮುಖ್ಯವಾದ ಅಂಶ ಇಲ್ಲಿದೆ.
# ಬುದ್ಧ ಪೂರ್ಣಿಮಾ ವಿರಾಗಿಯ ಸ್ಮರಣೆಯಲ್ಲಿ ಭಾರತ —
ಬುದ್ಧ ಪೂರ್ಣಿಮಾ ಬೌದ್ಧ ಮತೀಯರಿಗೆ ಬಹಳ ಪವಿತ್ರವಾದ ದಿನವಾಗಿದೆ. ವೈಶಾಖ ಶುದ್ಧ ಪೌರ್ಣಿಮೆ ಬುದ್ಧನ ಜನ್ಮ ದಿನ ಮತ್ತು ಬುದ್ಧನಿಗೆ ಜ್ಞಾನೋದಯವಾದ ದಿನವಾಗಿದೆ.
ಶ್ರೀವಿಷ್ಣುವಿನ ದಶಾವತಾರದಲ್ಲಿ 9 ನೇ ಅವತಾರ ಎಂದೇ ಪೂಜಿಸಲ್ಪಡುವ “ಬುದ್ಧ” ಎಂದರೆ ‘ಜ್ಞಾನ ಪಡೆದವನು’ ಎಂದರ್ಥವಾಗಿದೆ.
# ಬುದ್ಧ ಪೂರ್ಣಿಮಾ: ಸಮಯಗಳು —
ಬುದ್ಧ ಪೂರ್ಣಿಮೆಯ ದಿನಾಂಕ ಏಷ್ಯನ್ ಲೂನಿಸೋಲಾರ್ ಕ್ಯಾಲೆಂಡರ್ ಅನ್ನು ಆಧರಿಸಿದೆ. ಬುದ್ಧ ಪೂರ್ಣಿಮಾಯ ನಿಖರವಾದ ದಿನಾಂಕ ಪ್ರತಿ ವರ್ಷವೂ ಭಿನ್ನವಾಗಿರುತ್ತದೆ.
ಇದು ಸಾಮಾನ್ಯವಾಗಿ ಹಿಂದೂ ತಿಂಗಳ ವೈಶಾಖದಲ್ಲಿ ಹುಣ್ಣಿಮೆಯ ದಿನದಂದು ಬರುತ್ತದೆಯಾದರೂ, ಪಶ್ಚಿಮ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ದಿನಾಂಕವು ಬದಲಾಗುತ್ತದೆ. ಈ ವರ್ಷ ಬುದ್ಧ ಪೂರ್ಣಿಮೆಯನ್ನು ಮೇ 16 ರಂದೇ ಆಚರಿಸಲಾಗುತ್ತದೆ.
# ಸಿದ್ಧಾರ್ಥ ಬುದ್ಧನಾಗಿದ್ದು ಹೇಗೆ? —
ಪ್ರಪಂಚದಾದ್ಯಂತದ ಬೌದ್ಧರು ಮತ್ತು ಹಿಂದೂಗಳು ಗೌತಮ ಬುದ್ಧನ ಜನ್ಮವನ್ನು ಬುದ್ಧ ಜಯಂತಿ ಎಂದು ಆಚರಿಸುತ್ತಾರೆ. ಬುದ್ಧನು ಸಿದ್ಧಾರ್ಥ ಗೌತಮ ಎಂಬ ರಾಜಕುಮಾರನಾಗಿ ಪೂರ್ಣಿಮಾ ತಿಥಿಯಂದು ಕ್ರಿ.ಪೂ.563 ರಲ್ಲಿ ಹುಣ್ಣಿಮೆಯ ದಿನ ಲುಂಬಿನಿಯಲ್ಲಿ (ನೇಪಾಳದ ಪ್ರದೇಶ) ಜನಿಸಿದನು.
ಆದ್ದರಿಂದ ಅವರ ಜನ್ಮ ವಾರ್ಷಿಕೋತ್ಸವದ ದಿನವನ್ನು ಬುದ್ಧ ಪೂರ್ಣಿಮಾ ಅಥವಾ ವೈಶಾಖಿ ಬುದ್ಧ ಪೂರ್ಣಿಮಾ ಅಥವಾ ವೆಸಕ್ ಎಂದೂ ಕರೆಯಲಾಗುತ್ತದೆ.
ಶ್ರೀಲಂಕಾ, ಮ್ಯಾನ್ಮಾರ್, ಕಾಂಬೋಡಿಯಾ, ಜಾವಾ, ಇಂಡೋನೇಷಿಯಾ, ಟಿಬೆಟ್, ಮಂಗೋಲಿಯಾದಲ್ಲಿ ಬುದ್ಧ ಜಯಂತಿಯ ವಿಶೇಷ ದಿನವನ್ನು ‘ವೆಸಕ್’ ಎಂದೂ ವಿಸ್ತಾರವಾದ ಹಬ್ಬದ ಮೂಲಕ ನೆನಪಿಸಿಕೊಳ್ಳಲಾಗುತ್ತದೆ..!
ಶುದ್ಧೋಧನ ಮತ್ತು ಮಾಯಾದೇವಿಯರ ಪುತ್ರನಾಗಿ ಹುಟ್ಟಿದ ರಾಜಕುಮಾರನೇ ಸಿದ್ದಾರ್ಥ.
16ನೇ ವಯಸ್ಸಿನಲ್ಲೇ ಯಶೋಧರೆ ಎಂಬ ಕನ್ಯೆಯೊಂದಿಗೆ ವಿವಾಹವಾಗಿ, ತಮಗೆ ಹುಟ್ಟಿದ ಮುದ್ದಿನ ಮಗನಿಗೆ ‘ರಾಹುಲ’ ಎಂದು ಹೆಸರನಿಟ್ಟು, ರಾಜ್ಯ, ಸಂಪತ್ತು, ಅಧಿಕಾರ, ಪತ್ನಿ, ಮಗು ಎನ್ನುತ್ತ ನೆಮ್ಮದಿಯಿಂದ ಕಾಲಕಳೆಯುತ್ತಿದ್ದನು.
ಒಮ್ಮೆ ನಗರ ಸಂಚಾರ ಮಾಡುತ್ತಿದ್ದ ರಾಜ ಸಿದ್ಧಾರ್ಥನಿಗೆ ಶವ, ರೋಗಿ ಮತ್ತು ವೃದ್ಧನನ್ನು ಕಂಡು, ಬದುಕಿನಲ್ಲಿ ಕಾಯಿಲೆ, ವೃದ್ಧಾಪ್ಯ, ಸಾವು ಎಲ್ಲರಿಗೂ ಅನಿವಾರ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ.
ಈ ಕುರಿತು ಸನ್ಯಾಸಿ ಒಬ್ಬರನ್ನು ಪ್ರಶ್ನಿಸಿದಾಗ ನಿನಗೆ ಈ ಬಗ್ಗೆ ತಿಳಿಯಬೇಕೆಂದರೆ ಮೊದಲು ಎಲ್ಲವನ್ನೂ ತೊರೆದು ವಿರಾಗಿಯಾಗು, ಜ್ಞಾನಗಳಿಸಿದ ಮೇಲೆ ನಿನಗೆ ಈ ಪ್ರಶ್ನೆಯ ಉತ್ತರ ದೊರಕುತ್ತದೆ ಎಂದು ಸಾಧು ಉತ್ತರಿಸುತ್ತಾರೆ.
ಸಿದ್ಧಾರ್ಥನ ಮನಸ್ಸು ಬುದ್ಧನಾಗುವುದಕ್ಕೆ ಹಾತೊರೆಯುತ್ತಿದ್ದ ದಿನ ಕೊನೆಗೂ ಬರುತ್ತದೆ. ತನ್ನ 26 ನೇ ವಯಸ್ಸಿನಲ್ಲೇ ಮನೆ – ಮಠ, ಹೆಂಡತಿ – ಮಗುವನ್ನು ತೊರೆದ ಸಿದ್ಧಾರ್ಥ ‘ಗಯಾ’ಗೆ ತೆರಳಿ, ಅರಳಿ ಮರದ ಕೆಳಗೆ ಕುಳಿತು ಧ್ಯಾನಾಸಕ್ತನಾದನು. ಅನವರತ ಬಿಡದೇ 47 ದಿವಸಗಳ ಕಠಿಣ ತಪಸ್ಸುಮಾಡಿದಾಗ ಇದೇ ವೈಶಾಖ ಶುದ್ಧ ಹುಣ್ಣಿಮೆಯಂದು ಸಿದ್ಧಾರ್ಥನಿಗೆ ಜ್ಞಾನೋದಯವಾಯಿತು. ಅಂದಿನಿಂದ ಸಿದ್ಧಾರ್ಥ ‘ಬುದ್ಧ’ನಾದನು..!
# ಪ್ರಪಂಚದೆಲ್ಲೆಡೆ ಗೌತಮ ಬುದ್ಧನ ಮಂದಿರಗಳು —
ಸತ್ಯ, ಅಹಿಂಹೆ, ಸುಳ್ಳು ಹೇಳದಿರುವುದು, ಕಳ್ಳತನಮಾಡಬಾರದು ಆತನ ಮಹತ್ವದ ಉಪದೇಶವಾಗಿದೆ.
ಸಕಲ ಪ್ರಾಣಿಗಳಲ್ಲಿ ದಯೆಯಿರಲಿ, ಪ್ರಾಣಿಹಿಂಸೆ ಮಾಡಬೇಡಿ, ಆಸೆಯೇ ದುಃಖಕ್ಕೆ ಕಾರಣ, ಹಿಂಸೆ ದ್ವೇಷವೇ ದುಃಖದ ಮೂಲ, ಎಲ್ಲರನ್ನೂ ಪ್ರೀತಿಸಿ, ಎಂದು ಸಾರುತ್ತಾ ಬೌದ್ಧ ಧರ್ಮವನ್ನು ಪ್ರಸಾರ ಮಾಡುತ್ತಾ ಪ್ರಪಂಚದ ಉದ್ದಗಲಕ್ಕೂ ಸಂಚರಿಸಿ 80 ವರ್ಷಗಳಷ್ಟು ದೀರ್ಘ ಕಾಲ ಎಲ್ಲೆಡೆಯೂ ಧರ್ಮಪ್ರಚಾರಮಾಡಿದ ಮಹಾಪುರುಷ ‘ಗೌತಮ ಬುದ್ಧ’ನು..!
ಪ್ರಪಂಚದೆಲ್ಲೆಡೆಯೂ ಗೌತಮ ಬುದ್ಧನ ಮಂದಿರಗಳಿವೆ , ಅನೇಕ ದೊಡ್ಡ ದೊಡ್ಡ ಧ್ಯಾನಾಸಕ್ತ ಬುದ್ಧನ ಅನೇಕ ಬಗೆಯ ಮೂರ್ತಿಗಳಿವೆ, ಹಾಂಗ್ ಕಾಂಗ್, ಥೈಲ್ಯಾಂಡ್, ಬರ್ಮಾ, ಶ್ರೀಲಂಕಾ ದೇಶಗಳಲ್ಲಿ ಇವತ್ತಿಗೂ ಗೌತಮ ಬುದ್ಧನ ಅನುನಾಯಿಗಳೇ ಹೆಚ್ಚಾಗಿದ್ದಾರೆ. ಬುದ್ಧಪೂರ್ಣಿಮೆಯಂದು ಶ್ರೀವಿಷ್ಣುವಿನ ಅವತಾರಿ, ಸತ್ಯ ಅಹಿಂಸೆಯ ಸಾಕಾರಮೂರ್ತಿ ಗೌತಮ ಬುದ್ಧನಿಗೆ ನಮ್ಮ ನಮನವಿರಲಿ..!
# ಗೌತಮ್ ಬುದ್ಧರಿಂದ ಸ್ಪೂರ್ತಿದಾಯಕ ಉಲ್ಲೇಖಗಳು —
ಹಿಂದೂ ನಂಬಿಕೆಗಳ ಪ್ರಕಾರ ಬುದ್ಧನನ್ನು ಒಂಬತ್ತನೇ ವಿಷ್ಣು ಅವತಾರ (ಪುನರ್ಜನ್ಮ) ಎಂದೂ ಪರಿಗಣಿಸಲಾಗಿದೆ. ಬುದ್ಧ ಪೂರ್ಣಿಮೆಗೆ ಅಪಾರವಾದ ಮಹತ್ವವಿದೆ. ಪ್ರಪಂಚದಾದ್ಯಂತದ ಬೌದ್ಧ ಸಮುದಾಯಗಳು, ಮಠಗಳು ಪ್ರಾರ್ಥನೆಗಳನ್ನು ನಡೆಸುತ್ತವೆ, ಪಠಿಸುತ್ತವೆ, ಧ್ಯಾನಿಸುತ್ತವೆ, ಉಪವಾಸವನ್ನು ಆಚರಿಸುತ್ತವೆ.
ಅವರ ಧರ್ಮೋಪದೇಶಗಳನ್ನು ಚರ್ಚಿಸುತ್ತವೆ ಮತ್ತು ಅವರ ಬೋಧನೆಗಳನ್ನು ಪಾಲಿಸುತ್ತವೆ. ಬುದ್ಧ ಜಯಂತಿಯಂದು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುವ ಸಂಪ್ರದಾಯವೂ ಪಾಪಗಳನ್ನು ತೊಳೆಯುತ್ತದೆ ಎಂಬ ನಂಬಿಕೆಯಿಂದ ಹುಟ್ಟಿಕೊಂಡಿದೆ.
1. ಪ್ರತಿಯೊಂದು ಅನುಭವವು ಅದು ಎಷ್ಟೇ ಕೆಟ್ಟದಾಗಿ ತೋರಿದರೂ ಅದರೊಳಗೆ ಒಂದು ರೀತಿಯ ಆಶೀರ್ವಾದವನ್ನು ಹೊಂದಿರುತ್ತದೆ. ಅದನ್ನು ಕಂಡುಹಿಡಿಯುವುದು ಗುರಿಯಾಗಿದೆ..!
2. ಭೂತಕಾಲದಲ್ಲಿ ನೆಲೆಸಬೇಡಿ, ಭವಿಷ್ಯದ ಕನಸು ಕಾಣಬೇಡಿ, ವರ್ತಮಾನದ ಕ್ಷಣದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ..!
3. ಆರೋಗ್ಯವೇ ಶ್ರೇಷ್ಠ ಕೊಡುಗೆ, ನೆಮ್ಮದಿಯೇ ಶ್ರೇಷ್ಠ ಸಂಪತ್ತು, ನಿಷ್ಠೆಯೇ ಉತ್ತಮ ಸಂಬಂಧ..!
4. ನೀವು ಯಾರಿಗಾದರೂ ಜೀವನದಲ್ಲಿ ಒಳ್ಳೆಯ ದೀಪವನ್ನು ಬೆಳಗಿಸಿದರೆ, ಅದು ನಿಮ್ಮ ಮಾರ್ಗವನ್ನು ಸುಲಭಗೊಳಿಸುತ್ತದೆ..!
5. ಯಾವುದೂ ಸಂಪೂರ್ಣವಾಗಿ ಏಕಾಂಗಿಯಾಗಿ ಅಸ್ತಿತ್ವದಲ್ಲಿಲ್ಲ; ಎಲ್ಲವೂ ಎಲ್ಲದಕ್ಕೂ ಸಂಬಂಧಿಸಿದೆ..!
6. ಒಂದೇ ಮೇಣದಬತ್ತಿಯಿಂದ ಸಾವಿರಾರು ಮೇಣದಬತ್ತಿಗಳನ್ನು ಬೆಳಗಿಸಬಹುದು, ಮತ್ತು ಮೇಣದಬತ್ತಿಯ ಜೀವನವು ಕಡಿಮೆಯಾಗುವುದಿಲ್ಲ. ಹಾಗೇ ಸಂತೋಷವನ್ನು ಹಂಚಿಕೊಳ್ಳುವುದರಿಂದ ಎಂದಿಗೂ ಕಡಿಮೆಯಾಗುವುದಿಲ್ಲ..!
7. ನಿಷ್ಫಲವಾಗಿರುವುದು ಸಾವಿಗೆ ಒಂದು ಚಿಕ್ಕ ಮಾರ್ಗವಾಗಿದೆ ಮತ್ತು ಶ್ರದ್ಧೆಯು ಒಂದು ಜೀವನ ವಿಧಾನವಾಗಿದೆ; ಮೂರ್ಖರು ನಿಷ್ಫಲರು, ಬುದ್ಧಿವಂತರು ಶ್ರದ್ಧೆಯುಳ್ಳವರು..!
8. ಎಲ್ಲಾ ತಪ್ಪು ಮನಸ್ಸಿನಿಂದ ಉಂಟಾಗುತ್ತದೆ. ಮನಸ್ಸು ಪರಿವರ್ತನೆಯಾದರೆ ತಪ್ಪು ಮಾಡಲಾಗದು..!
9. ಅರಮನೆಯಲ್ಲಿ ಐಷಾರಾಮಿ ಜೀವನ, ಕಾಡಿನಲ್ಲಿ ತಪಸ್ವಿಯಾಗಿ ಬದುಕುವುದು ಸ್ವಾತಂತ್ರ್ಯದ ದಾರಿಯಲ್ಲ..!
10. ಸಾವು ಮತ್ತು ದುಃಖದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನರು ಜೀವನದಲ್ಲಿ ಸಂತೋಷವನ್ನು ಮಾತ್ರ ನಿರೀಕ್ಷಿಸಿದರೆ, ಅವರು ನಿರಾಶೆಗೊಳ್ಳುತ್ತಾರೆ..