ಕಲಬುರಗಿ: ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗೆ ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸÀನೂರ್ ಕಿಡಿ ಕಾರಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು 2018 ರಿಂದ ಇಲ್ಲಿಯವರೆಗೂ ಬಿಜೆಪಿ ಹಗರಣಗಳ ಸರಕಾರವನ್ನೇ ರಾಜ್ಯಕ್ಕೆ ನೀಡಿದೆ. ಉಪನ್ಯಾಸಕರ ಹುದ್ದೆ, ಪಿಎಸ್‍ಐ ಹುದ್ದೆ, ಪಿಡಬ್ಲೂಡಿ ಜೆಇ, ಎಇ ಹುದ್ದೆ, ಕೆಪಿಸಿಎಸ್‍ಸಿ ನೇಮಕಾತಿಗಳು ಸೇರಿದಂತೆ ಎಲ್ಲಾ ನೇಮಕಾತಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಿಜೆಪಿ ಮಾಡಿ ಕಾಂಗ್ರೆಸ್ಸನ್ನು ದೂರುತ್ತಿದೆ. ಬಿಜೆಪಿಯ ಈ ನರಿ ಬುದ್ಧಿಯನ್ನು ಮತದಾರರು ಗಮನಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಲಿದ್ದಾರೆಂದು ಹೇಳಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತ ಅಂಗನವಾಡಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಡಾ.ಉಮೇಶ ಜಾಧವ
ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ, ಜೇವರ್ಗಿಯಲ್ಲಿ ಡಾ. ಅಜಯ್ ಸಿಂಗ್ ಶಾಸಕರಾಗಿ ತುಂಬ ಜನಪರ ಕೆಲಸಗಳನ್ನು ಮಾಡುತ್ತ ಹೊರಟಿದ್ದರೂ ಇದ್ಯಾವುದನ್ನೂ ಕಾಣದಂತೆ ಬಿಜೆಪಿ ಅಧ್ಯಕ್ಷರು ಜಾಣ ಕುರುಡು ಧೋರಣೆಯ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿರುವ 9 ಅಸೆಂಬ್ಲಿ ಸ್ಥಾನಗಳಲ್ಲಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಬಿಜೆಪಿ ಮುಕ್ತ ಕಲಬುರಗಿಯನ್ನಾಗಿ ಮಾಡುವ ಪಣ ತೊಟ್ಟಿದ್ದಾರೆಂದು ಭೂಸನೂರ್ ಭವಿಷ್ಯ ನುಡಿದಿದ್ದಾರೆ.
ಸರ್ಕಾರದ ಸಚಿವರೇ ಲೈಂಗಿಕ ಹಗರಣ ಮಾಡಿದರು, ಪಿಎಸ್‍ಐ ಹುದ್ದೆ ಮಾರಾಟಕ್ಕಿಟ್ಟರು, ಅಧ್ಯಾಪಕರ ಹುದ್ದೆಯಲ್ಲಿ ಭ್ರಷ್ಟಾಚಾರ, ಇದನ್ನೆಲ್ಲ ಮಾಡಿದ್ದು ಬಿಜೆಪಿಯವರು. ಇಡೀ ರಾಜ್ಯಾದ್ಯಂತ ಈ ಬಗ್ಗೆ ಚರ್ಚೆಗಳು ಸಾಗಿವೆ. ಮಾಧ್ಯಮದಲ್ಲಿ ನಿತ್ಯ ಪುಟಗಟ್ಟಲೇ ಇವರ ಭ್ರಷ್ಟಾಚಾರದ ವಿಚಾರಗಳು ಪ್ರಕಟವಾಗುತ್ತಿರೋದನ್ನ ಮತದಾರರು ಗಮನಿಸುತ್ತಿದ್ದಾರೆ. ತಮ್ಮ ಸಮಯಕ್ಕಾಗಿ ಕಾಯುತ್ತಿದ್ದಾರೆ. ಆಗ ಬಿಜೆಪಿಗೆ ಪಾಠ ಕಲಿಸಲು ಸಜ್ಜಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಾಜಿ ಸಿಎಂ, ದಿ. ಧರಂಸಿಂಗ್, ರಾಜ್ಯಸಭೆ ವಿರೋಧ ಪಕ್ಷ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರ ಸತತ ಪರಿಶ್ರಮದಿಂದ ಈ ಭಾಗಕ್ಕೆ ಕಲಂ 371 (ಜೆ) ರಕ್ಷೆ ದೊರಕಿತು. ಇದರಿಂದ ಈ ಭಾಗದ ಯುವಕರ ಭವಿಷ್ಯವೇ ಬದಲಾಗುತ್ತಿದೆ. ಬಿಜೆಪಿಯವರಿಗೆ ಈ ಮೀಸಲು ನೀತಿ ಸರಿಯಾಗಿ ಜಾರಿಗೆ ತರಲಾಗದೆ ನಮ್ಮ ಭಾಗದ ಯುವಕರಿಗೆ ನಿರಂತರ 5 ವರ್ಷದಿಂದ ಮೋಸ ಮಾಡುತ್ತಿದ್ದಾರೆಂದು ದೂರಿದ್ದಾರೆ.
ಇದನ್ನೂ ಓದಿ: ಹೆಚ್. ವಿಶ್ವನಾಥ್‌ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ನಾಳೆ ಪತ್ರಚಳುವಳಿ
ಕಲ್ಯಾಣ ನಾಡಿನ ಎಲ್ಲಾ 5 ಸಂಸತ್ ಸ್ಥಾನಗಳಿಂದ ಬಿಜೆಪಿಯವರು ಆಯ್ಕೆಯಾಗಿ ದಿಲ್ಲಿ ಸೇರಿದರೂ ಸಾಧನೆ ಶೂನ್ಯ. ಇಲ್ಲಿರುವ 42 ಅಸೆಂಬ್ಲಿ ಸ್ಥಾನಗಳಲ್ಲಿ 19 ರಲ್ಲಿ ಬಿಜೆಪಿ ಗೆದ್ದರೂ ಕಲ್ಯಾಣ ನಾಡಿನ ಕಲ್ಯಾಣ ಮಾಡಲಾಗಿಲ್ಲ. ಕೆಕೆಆರ್‍ಡಿಬಿ 3 ಸಾವಿರ ಕೋಟಿ ರು ಅನುದಾನ ಬರೀ ತೋರಿಕೆಗೆ, ಶೇ. 50 ಕ್ಕೂ ಹೆಚ್ಚು ಪರ್ಸೆಂಟೇಜ್ ಅವ್ಯವಹಾರದಲ್ಲಿ ಹಣ ಸೋರಿ ಹೋಗುತ್ತಿದೆ. ಈ ಪ್ರದೇಶದ ಹೆಸರು ಬದಲಿಸಿದರೇ ಹೊರತು ಪ್ರಗತಿ ಮಾಡಲಾಗದೆ ಬಿಜೆಪಿಗರು ಕೈಕಟ್ಟಿ ಕುಳಿತಿದ್ದಾರೆ. ಇಂತಹ ಬಿಜೆಪಿಯವರಿಗೆ ಈ ಭಾಗದ ಜನತೆ ಕಾಯಂ ಆಗಿ ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಲು ಸಿದ್ಧರಾಗಿದ್ದಾರೆ, ಚುನಾವಣೆಗಾಗಿ ಕಾಯುತ್ತಿದ್ದಾರೆಂದು ಹಣಮಂತರಾವ ಭೂಸನೂರ್ ಹೇಳಿದ್ದಾರೆ.