ವಾಡಿ: ಹೆಚ್ಚು ಅಂಕ ಗಳಿಕೆಯಿಂದ ಬದುಕಿನ ಸಂಸ್ಕಾರ ದೊರಕದು. ಕಲಿಸಿದ ಗುರುಗಳನ್ನು ಮತ್ತು ಹೆತ್ತು ಸಾಕಿದವರನ್ನು ಗೌರವದಿಂದ ಕಂಡು ಅವರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಆ ಶಿಕ್ಷಣಕ್ಕೆ ಮೌಲ್ಯವಿರುತ್ತದೆ ಎಂದು ಪುರಸಭೆ ವ್ಯವಸ್ಥಾಪಕ ಅಧಿಕಾರಿ ಮಲ್ಲಿಕಾರ್ಜುನ ಕಾರಕೂಡ ಹೇಳಿದರು.
ಪಟ್ಟಣದ ಮಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಶಿಕ್ಷಣ ಪಡೆದುಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಉನ್ನತ ಶಿಕ್ಷಣದ ಗುರಿಯಿರಬೇಕು. ಪಾಠದ ಜ್ಞಾನದ ಜತೆಗೆ ಸಾರ್ವಜನಿಕ ಬದುಕಿನ ರೀತಿ ನೀತಿಯೂ ತಿಳಿದಿರಬೇಕು. ಶೈಕ್ಷಣಿಕ ಸಾಧನೆಯಲ್ಲಿ ವೈದ್ಯ, ವಕೀಲ, ಪೊಲೀಸ್ ಅಧಿಕಾರಿ, ಇಂಜಿನೀಯರ್, ಶಿಕ್ಷಕ, ದಂಡಾಧಿಕಾರಿ ಸೇರಿದಂತೆ ಯಾವೂದೇ ಹುದ್ದೆಯಲ್ಲಿದ್ದರೂ ಬಡವರ ಕಷ್ಟ ನೋವುಗಳಿಗೆ ಸ್ಪಂಧಿಸುವ ಗುಣ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ಮಹಾತ್ಮಾ ಗಾಂಧಿ ಶಾಲೆಯ ಕಾರ್ಯದರ್ಶಿ ಶೇಖ ಅನ್ವರ್ ಖಾನ್ ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕಿ ಸೈಯದಾನಾಜ್ ಪರ್ವೀನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಕಂದಾಯ ಅಧಿಕಾರಿ ಎ.ಪಂಕಜಾ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಶಿಕ್ಷಕರಾದ ವಿನ್ನಿ ಪರ್ಸಿಸ್, ಬಸವರಾಜ ಮದ್ದೂರ, ನಾಗರತ್ನಾ ಸುಗೂರ, ಶ್ರೀದೇವಿ ಕಪ್ರಿ, ಯಾಸ್ಮೀನ್ ಶಖೀಲ್, ನೀಲಾ ರಾಠೋಡ, ಶಿವುಕುಮಾರ ವಾಲಿ, ಮರಲಿಂಗರೆಡ್ಡಿ ಮಾಲಗತ್ತಿ, ರಮೇಶ ಮಾಶಾಳ, ವಿಶ್ವರಾಧ್ಯ ಗುತ್ತೇದಾರ ಪಾಲ್ಗೊಂಡಿದ್ದರು.