ಕಲಬುರಗಿ: ಇನ್ನೇನು ಮುಂಗಾರು ಹಂಗಾಮು ಆರಂಭವಾಗಲಿದ್ದು, ಸುಧಾರಿತ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಎದುರಾಗದಂತೆ ಕೃಷಿ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಚಂದ್ರಶೇಖರ ಹಿರೇಮಠ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮುಂಗಾರಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಶೇ. ೨೦ರಷ್ಟು ಮಳೆ ಹೆಚ್ಚಾಗುವ ಅಂದಾಜಿದ್ದು, ಬಿತ್ತನೆಗೆ ಬೇಕಾಗುವ ಡಿಎಪಿ, ಯೂರಿಯಾ ಹೆಚ್ಚಿನ ಪ್ರಮಾಣದ ಅವಶ್ಯಕತೆಯಿದೆ. ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ೨೮ ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಳೆದ ವರ್ಷ ೨೫ ಸಾವಿರ ಮೆಟ್ರಿಕ್ ಟನ್ ಸರಬರಾಜು ಮಾಡಲಾಗಿತ್ತು. ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ಶೀಘ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.
ಇಫ್ಕೊ ಹಾಗೂ ಜೈ ಕಿಸಾನ್ ಕಂಪೆನಿಗಳ ಡಿಎಪಿ, ಯೂರಿಯಾ ತೀವ್ರ ಅಭಾವ ಕಂಡುಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಮೋಸವಾಗದಂತೆ ನಕಲಿ ರಸಗೊಬ್ಬರ ಮಾರಾಟಗಾರರ ಮೇಲೆ ತೀವ್ರ ನಿಗಾವಹಿಸಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಮಾರಾಟದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಬೆಳಗ್ಗೆ ೧೧ಕ್ಕೆ ಬಂದು ಕೆಡಿಪಿ ಸಭೆ ನಡೆಸಿ ಸಂಜೆ ೪ ಗಂಟೆಗೆ ಬಂದು ವಾಪಸ್ ಹೋಗುವುದಲ್ಲ. ಸ್ಥಳದಲ್ಲಿ ಠಿಕಾಣಿ ಹೂಡಿ ಸಮಸ್ಯೆ ಅರಿತುಕೊಳ್ಳಬೇಕು. ಜಿಲ್ಲೆಯಲ್ಲಿ ಯಾರೂ ಹೇಳೋರು, ಕೇಳೂರು ಇಲ್ಲ ಎಂಬ ಸ್ಥಿತಿ ಎದುರಾಗಿದೆ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು.
ರಾಜ್ಯದಲ್ಲಿ ೩,೫೦೦ ರೈತ ಅನುವುಗಾರರಿದ್ದು, ಭೂಚೇತನ ಕಾರ್ಯಕ್ರಮದಡಿ ರೈತ ಅನುವುಗಾರರನ್ನು ನೇಮಿಸಿಕೊಳ್ಳಬೇಕು. ಎಲ್ಲ ಹಳ್ಳಿಗಳ ರೈತರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಕೃಷಿ ಸಂಬಂಧಿಸಿದ ಮಾಹಿತಿ ನೀಡುತ್ತಾರೆ. ರೈತ ಅನುವುಗಾರರಿಗೆ ಮಾಸಿಕ ಹತ್ತು ಸಾವಿರ ಗೌರವ ಧನ ನೀಡಿ ನೇಮಕಾತಿ ಮಾಡಿಕೊಳ್ಳಬೇಕೆನ್ನುವ ಶಿವಶಂಕರರೆಡ್ಡಿ ಅವರ ಪ್ರಸ್ತಾವನೆ ಕೃಷಿ ಆಯುಕ್ತರ ಕಚೇರಿಯಲ್ಲಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ತಮ್ಮ ಮೊಂಡು ಹಠ ಬಿಟ್ಟು ಇದಕ್ಕೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶಿವಕುಮಾರ ರೇಷ್ಮಿ, ಎಲ್. ಎಸ್. ರಾಠೋಡ, ಶರಣ ಐಟಿ, ಮಹಾಂತಗೌಡ ಪಾಟೀಲ್, ಎಚ್. ಡಿ. ಘೋರ್ಪಡೆ, ಜಗದೀಶ ಗಿರಕಿ, ಸಿದ್ದರಾಮ ಹಡಲಗಿ ಇದ್ದರು.