ಕಲಬುರಗಿ: ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೈತ ಸಂಘದ ಆತ್ಮಾವಲೋಕನ ಸಭೆಗಾಗಿ ಆಗಮಿಸಿದ್ದ ರೈತಾಂದೋಲನದ ಪ್ರಮುಖ ನಾಯಕರಲ್ಲೊಬ್ಬರಾದ ರಾಕೇಶ್ ಟಿಕಾಯತ್ ಮತ್ತು ಜೊತೆಗಿದ್ದ ರೈತ ಹೋರಾಟಗಾರರ ಮೇಲೆ ಹಲ್ಲೆಕೋರರು ಮಸಿ ಎರಚಿ ದಾಳಿ ನಡೆಸಿದ್ದನ್ನು ಕರವೇ (ಪ್ರವೀಣ್ ಶೆಟ್ಟಿ) ಬಣ ದ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದಾಳಿಕೋರರನ್ನು ಕೂಡಲೇ ಬಂಧಿಸಿ, ಈ ಗಂಭೀರ ಅಪರಾಧಕ್ಕೆ ಕಠಿಣವಾದ ಪ್ರಕರಣವನ್ನು ಅವರ ಮೇಲೆ ದಾಖಲಿಸಬೇಕು. ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ, ವೇಗವಾಗಿ ತನಿಖೆ ನಡೆದು ಅಪರಾಧಿಗಳಿಗೆ ಬೇಗ ಶಿಕ್ಷೆಯಾಗಬೇಕು.
ಪ್ರಮುಖ ನಾಯಕರಿಗೆ ಸೂಕ್ತ ಭದ್ರತೆ ನೀಡದೆ ಕರ್ತವ್ಯ ಲೋಪ ಎಸಗಿರುವ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.ಇತ್ತೀಚಿನ ದಿನಗಳಲ್ಲಿ ಒಂದಾದ ಮೇಲೊಂದರಂತೆ ಭುಗಿಲೇಳುತ್ತಿರುವ ಅಶಾಂತಿಯ ಘಟನೆಗಳನ್ನು ಗಮನಿಸಿದರೆ, ಕರ್ನಾಟಕದ ರಾಜ್ಯ ಸರ್ಕಾರ ಪ್ರಜಾತಾಂತ್ರಿಕ ರೀತಿಯಲ್ಲಿ ಆಳ್ವಿಕೆ ನಡೆಸುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರದ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.ಜನತೆಗೆ ಶಾಂತಿ-ಸುವ್ಯವಸ್ಥೆ ರಕ್ಷಣೆಯ ಭರವಸೆ ನೀಡಬೇಕೆಂದು ಅವರು ಒತ್ತಾಯಿಸಿದರು.