ಕಲಬುರಗಿ: ದೇಶದ ಅನ್ನದಾತರ ನಾಯಕ ರಾಕೇಶ ಸಿಂಗ್ ಟಿಕಾಯತ್ ಅವರಿಗೆ ಮಸಿ ಬಳಿದಿರುವುದು ಖಂಡನೀಯ. ಕೃತ್ಯ ಎಸಗಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ)ದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶರಣು ಹೊಸಮನಿ ಆಗ್ರಹಿಸಿದರು.
ಹೊರ ರಾಜ್ಯದಿಂದ ಬಂದ ನಾಯಕರಿಗೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಟಿಕಾಯತ್ ಅವರಿಗೆ ರಕ್ಷಣೆ ನೀಡಿಲ್ಲ.ಇದು ಪೋಲಿಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯ. ಮೂರು ಕೃಷಿ ಕಾಯ್ದೆ ವಿರುದ್ಧ ವರ್ಷದ ಹಿಂದೆ ದೆಹಲಿಯಲ್ಲಿ ನಡೆದ ಧರಣಿ ಯಶ್ವಸಿ ನಂತರ ಟಿಕಾಯತ್ ಅವರು ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿದ್ದರು.
ಇದನ್ನು ಸಹಿಸದಿರುವ ಕಿಡಿಗೇಡಿಗಳ ಕುಮ್ಮಕ್ಕಿನಿಂದಲೇ ಟಿಕಾಯತ್ ಅವರಿಗೆ ಮಸಿ ಬಳಿಯಲಾಗಿದೆ ಎಂದು ದೂರಿದರು. ಈ ಕೃತ್ಯದಿಂದ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನ, ಮರ್ಯಾದೆ, ಸಂಸ್ಕೃತಿ ಹರಾಜು ಆದಂತಾಗಿದೆ. ಸರ್ಕಾರ ಈ ಘಟನೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ಒತ್ತಾಯಿಸಿದರು.