ವಾಡಿ (ಚಿತ್ತಾಪುರ): ಅಂತರಜಾತಿ ವಿವಾಹ ಕಾರಣಕ್ಕೆ ಯುವತಿಯ ಪೋಷಕರು ಯುವಕನ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುವಾರ ಚಿತ್ತಾಪುರ ತಾಲ್ಲೂಕಿನ ಚಾಮನೂರು ಗ್ರಾಮದಲ್ಲಿ ಸಂಭವಿಸಿದೆ.
ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಚಾಮನೂರು ಗ್ರಾಮದ ಕುರುಬ ಸಮುದಾಯದ ಸೂರ್ಯಕಾಂತ ಪೂಜಾರಿ ಹಾಗೂ ಬೇಡ ಸಮುದಾಯದ ಸಂಗೀತಾ ಮಾಲಗತ್ತಿ ಬೆಂಗಳೂರಿನಲ್ಲಿ ಸಂಸಾರ ನಡೆಸುತ್ತ ಈ ಪ್ರೇಮಿಗಳು ಯುವತಿಯ ಕುಟುಂಬಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದರು. ಇವರಿಗೆ ಒಂದು ಮಗು ಕೂಡ ಇದೆ.
ಮೊನ್ನೆಯಷ್ಟೇ ಗ್ರಾಮಕ್ಕೆ ಬಂದಿದ್ದ ಈ ಜೋಡಿಗಳು ಇನ್ನೇನು ಬೆಂಗಳೂರಿಗೆ ಹೊರಡುವ ತಯಾರಿಯಲ್ಲಿದ್ದರು ಎನ್ನಲಾಗಿದ್ದು, ಒಳಗೊಳಗೆ ಕತ್ತಿ ಮಸಿಯುತ್ತಿದ್ದ ಯುವತಿಯ ಪೋಷಕರು ಗುರುವಾರ ಯುವಕ ಸೂರ್ಯಕಾಂತ ಪೂಜಾರಿ ಅವರ ಪೋಷಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಕೊಡಲಿ, ಕಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದು ಮಾರಣಾಂತಕ ಹಲ್ಲೆ ನಡೆಸಿದ್ದಾರೆ. ನಮ್ಮ ತಂದೆ ದಶರಥ ಪೂಜಾರಿ, ಅಣ್ಣ ತಿಪ್ಪಣ್ಣ ಪೂಜಾರಿ ಮತ್ತು ಪತ್ನಿ ಸಂಗೀತಾ ಹಲ್ಲೆಗೊಳಗಾಗಿದ್ದಾರೆ. ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದೇವೆ.
ಹಲ್ಲೆ ನಡೆಸಿದ ಪತ್ನಿಯ ಪೋಷಕರಾದ ದ್ಯಾವಪ್ಪ ಮಾಲಗತ್ತಿ, ಲಕ್ಷ್ಮೀ ದ್ಯಾವಪ್ಪ, ಈಶ್ವರಾಜ, ಯಂಕಪ್ಪ ಅವರ ವಿರುದ್ಧ ದೂರು ನೀಡಲು ವಾಡಿ ಪೊಲೀಸ್ ಠಾಣೆಗೆ ಹೋದರೆ, ಕರ್ತವ್ಯನಿರತ ಪೊಲೀಸರು ನಮ್ಮ ಕಷ್ಟ ಕೇಳಲಿಲ್ಲ ಎಂದು ಪ್ರೇಮಿ ಸೂರ್ಯಕಾಂತ ಪೂಜಾರಿ ದೂರಿದ್ದಾರೆ.