ಶಹಾಬಾದ:ಜೀವಿಗಳ ಉಳಿವಿಗೆ ಗಿಡಮರಗಳಿಂದ ಸಿಗುವ ಆಮ್ಲಜನಕವೇ ಆಧಾರವಾಗಿದ್ದು, ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯ ಋಣ ತೀರಿಸಬೇಕಾಗಿದೆ ನಗರದ ಕಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾದೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.
ಅವರು ರವಿವಾರ ನಗರದ ನ್ಯಾಯಾಲಯದಲ್ಲಿ ಪರಿಸರ ದಿನದ ಅಂಗವಾಗಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಿಡಮರಗಳು ಇಲ್ಲದೇ ಹೋದರೆ ಉಸಿರಾಡಲು ಆಮ್ಲಜನಕವಿಲ್ಲದೇ ಯಾವ ಜೀವಿಗಳು ಬದುಕುಳಿಯಲಾರವು. ಆದ್ದರಿಂದ ಸಸಿಗಳನ್ನು ನೆಟ್ಟರೆ ಸಾಲದು ಅವುಗಳನ್ನು ಸೂಕ್ತ ರೀತಿಯಲ್ಲಿ ಪೋಷಣೆ ಮಾಡಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕೆಂದು ಹೇಳಿದರು.
ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ ಮಾತನಾಡಿ, ಹಿಂದೆ ರೈತರು ತಮ್ಮ ಹೊಲದ ಬದುವಿನಲ್ಲಿ ಅನೇಕ ಮರಗಳನ್ನು ಬೆಳೆಯುವ ಮೂಲಕ ಪರಿಸರದ ಉಳಿವಿಗೆ ಕಾರಣರಾಗಿದ್ದರು. ಆದರೆ ಇಂದು ಗಿಡ ಮರಗಳನ್ನು ಬೆಳೆಸಲು ನಿರಾಸಕ್ತಿ ತೋರುತ್ತಿರುವುದರಿಂದ ಪರಿಸರ ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಭೂಮಿಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಮುಂದಾಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಶಿಂಧೆ, ಹಿರಿಯ ವಕೀಲರಾದ ಅತುಲ್ ಯಲಶೆಟ್ಟಿ , ದೇವಪ್ಪ ಕುಲಕುಂದಿಕರ್, ನಾಗೇಶ ಧನ್ನೇಕರ್, ರಮೇಶ್ ರಾಠೋಡ, ತಿಮ್ಮಯ್ಯ ಮಾನೆ ಹಾಗೂ ಅರಣ್ಯ ಇಲಾಖೆಯ ಪರಶುರಾಮ ಉಪಸ್ಥಿತರಿದ್ದರು.