ಶಹಾಬಾದ : ಸಸಿಗಳನ್ನು ಹಚ್ಚುವುದರ ಜೊತೆಗೆ ಅವುಗಳನ್ನು ಮಕ್ಕಳಂತೆ ಸಂರಕ್ಷಿಸಿ ಕಾಳಜಿಯಿಂದ ಬೆಳೆಸಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಹೇಳಿದರು.
ಅವರು ರವಿವಾರ ಮರತೂರ ಗ್ರಾಪಂ ವತಿಯಿಂದ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮರಗಳನ್ನು ಬೆಳೆಸಿ ಸೂಕ್ತವಾದ ಪೋಷಣೆ ಮಾಡಿದರೆ ಕಾಲಕಾಲಕ್ಕೆ ಮಳೆಯಾಗುತ್ತದೆ. ಆದರೆ ಇಂದು ದೇಶದ ಎಲ್ಲಾ ಕಡೆ ಮುಂಗಾರು ಮಳೆ ಸರಿಯಾದ ವೇಳೆಗೆ ಬರದೇ ಇರುವದಕ್ಕೆ ಈ ಪರಿಸರ ನಾಶವೇ ಕಾರಣ. ಕೇವಲ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿಕೊಂಡು ಕೂಡದೇ ಅದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಆ ಘೋಷ ವಾಕ್ಯಕ್ಕೆ ಮನ್ನಣೆ ಬರುತ್ತದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರದೊಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯ ಅಧಿಕಾರಿ ಯೋಗಾನಂದ ಮಾತನಾಡಿ, ಪರಿಸರ ಸಮತೋಲನ ಕಾಪಾಡಲು ನಾವು ಹೆಚ್ಚು ಹೆಚ್ಚು ಸಸಿಗಳನ್ನು ಬೆಳೆಸುವ ಮುಖಾಂತರ ಪರಿಸರ ಸಂರಕ್ಷಣೆ ಮಾಡಬೇಕು. ಅಲ್ಲದೇ ಪರಿಸರ ಸಂರಕ್ಷಣೆಯಲ್ಲಿ ಸುಂದರಲಾಲ ಬಹುಗುಣ ಹಾಗೂ ಸಾಲು ಮರದ ತಿಮ್ಮಕ್ಕರ ಶ್ರಮ ಬಹಳಷ್ಟಿದೆ ಎಂದರು. ಅಲ್ಲದೇ ಹಳ್ಳಿ ಹಳ್ಳಿಗಳಿಗೂ ಈ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾದ ಜವಾಬ್ದಾರಿ ನಮ್ಮದಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಗುರುನಾಥ.ಬಿ.ಕಂಬಾನೂರ, ಗ್ರಾಪಂ ಸದಸ್ಯ ಶಾಮ ಸುಣಗಾರ, ಪಿಡಿಓ ಭಗವಂತರಾವ, ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಬಸವರಾಜ, ರಾಜಶೇಖರ ಪಾಟೀಲ, ಕುಪೇಂದ್ರ,ಅಣ್ಣಾಸಾಬ ಸೇರಿದಂತೆ ಉದ್ಯೋಗ ಖಾತ್ರಿ ಕಾರ್ಮಿಕರು ಪಾಲ್ಗೊಂಡಿದ್ದರು.
ಶಿಕ್ಷಕ ಟೀಕಾರಾವ ನಿರೂಪಿಸಿದರು, ಮಲ್ಲಿಕಾರ್ಜುನ ದೊಡ್ಡಿ ಸ್ವಾಗತಿಸಿದರು,ಕಾಯಕ ಮಿತ್ರ ನಾಗವೇಣಿ.ಎಮ್.ದೊಡ್ಡಿ ವಂದಿಸಿದರು.