ಕಲಬುರಗಿ: ನಗರಕ್ಕೆ ಆಗಮಿಸಿದ ಕರ್ನಾಟಕ ಅಲೆಮಾರಿ ಮತ್ತು ಅರೆ-ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಗೆ ಅಖಿಲ ಕರ್ನಾಟಕ ಹೆಳವ ಸಮಾಜ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಅಲೆಮಾರಿ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯದವರಿಗೆ ಸರಕಾರದ ಸೌಲಭ್ಯಗಳು ಸಮರ್ಪಕವಾಗಿ ಸಿಗುವಂತಾಗಬೇಕು. ಅಲೆಮಾರಿ ಅಭಿವೃದ್ದಿ ನಿಗಮದ ವ್ಯಾಪ್ತಿಯಲ್ಲಿ ಪ್ರವರ್ಗ-೧ರ ೪೬ ಅಲೆಮಾರಿ ಜಾತಿಗಳು ಬರುತ್ತವೆ. ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರವನ್ನು ಸಂಬಂಧಿಸಿದ ಶಾಸಕರಿಗೆ ವಹಿಸಿಕೊಡಬೇಕು ಹಾಗೂ ಮಂಜೂರಾದ ಸಾಲದ ಮೊತ್ತವನ್ನು ಆರ್.ಟಿ.ಜಿ ಎಸ್. ಮುಖಾಂತರ ವರ್ಗಾವಣೆ ಮಾಡುವ ಅಧಿಕಾರ ಕಲಬುರಗಿ ಕೇಂದ್ರ ಕಚೇರಿಗೆ ನೀಡಬೇಕು. ಸರ್ಕಾರಿ ಖಾಲಿ ಜಾಗದಲ್ಲಿ ಅಲೆಮಾರಿ ಆಶ್ರಮ ಶಾಲೆಗಳ ಕಟ್ಟಡ ನಿರ್ಮಿಸಬೇಕು ಮತ್ತು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಖಾಯಂಗೋಳಿಸಿಬೇಕು. ಸರಕಾರ ಅಲೆಮಾರಿಗಳ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಿ ರೂ.೨೫೦ ಕೋಟಿ ಅನುದಾನವನ್ನು ಮೀಸಲಿಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನಕಲಿ ಬೀಜ ಗೊಬ್ಬರಗಳ ಬಗ್ಗೆ ಎಚ್ಚರ ವಹಿಸಿ: ಮಲ್ಲಿಕಾರ್ಜುನ ಸತ್ಯಂಪೇಟೆ
ಮೊರಾರ್ಜಿ ದೇಸಾಯಿ, ನವೋದಯ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಇನ್ನುಳಿದ ವಸತಿ ಶಾಲೆಗಳಲ್ಲಿ ಹಾಗೂ ಮೆಟ್ರಿಕ್ ಪೂರ್ವ/ನಂತರದ ವಸತಿ ನಿಲಯಗಳಲ್ಲಿ ಈಗಿರುವ ಮಾನದಂಡಗಳನ್ನು ಬದಲಾಯಿಸಿ ಅರ್ಜಿ ಹಾಕಿದ ಎಲ್ಲಾ ಅಲೆಮಾರಿ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವಂತಾಗಬೇಕು. ನಿಗಮದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ನೀಡುತ್ತಿರುವ ಸಾಲದ ಮೊತ್ತವನ್ನು ಹೆಚ್ಚಿಸಬೇಕು. ಪ್ರವರ್ಗ-೧ರ ಅಲೆಮಾರಿ ಸಮುದಾಯಗಳ ಮನೆ ನಿರ್ಮಾಣಕ್ಕಾಗಿ ರಾಜೀವ್ ಗಾಂದಿ ವಸತಿ ನಿಗಮದಿಂದ ನೀಡುತ್ತಿರುವ ರೂ. ೨.೫ ಲಕ್ಷಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ, ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ, ಸಂತೋಷ ಸಿಂದೆ, ಅರುಣಕುಮಾರ ಕಟ್ಟಿಮನಿ, ಅವಿನಾಶ ಬಿ. ಹೆಳವರ ಹಾಗೂ ಇನ್ನಿತರ ಸಮಾಜದ ಮುಖಂಡರು ಇದ್ದರು.
ಇದನ್ನೂ ಓದಿ: ಖಾಸಗಿ ಶಾಲೆಗಳ ಮಿತಿ ಮೀರಿದ ಶುಲ್ಕ ವಸೂಲಿಗೆ ಕಡಿವಾಣ ಹಾಕಿ: ವೆಂಕಟೀಶ ನಾಯಕ