ಸುರಪುರ: ತಾಲೂಕಿನಲ್ಲಿರುವ ಖಾಸಗಿ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಡೊನೇಶನ್ ಹಾವಳಿ ಮಿತಿ ಮೀರಿದ್ದು ಹೆಚ್ಚಿನ ಪ್ರಮಾಣದ ಶುಲ್ಕ ವಸೂಲಾತಿಗೆ ಕಡಿವಾಣ ಹಾಕುವಂತೆ ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಒತ್ತಾಯಿಸಿದರು.
ನಗರದ ತಹಸೀಲ್ ಕಚೇರಿ ಬಳಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ತಾಲೂಕಿನಾದ್ಯಂತ ಇರುವ ಪೂರ್ವ ಪ್ರಾಥಮಿಕ,ಪ್ರಾಥಮಿಕ,ಪ್ರೌಢ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕದ ಹೆಸರಲ್ಲಿ ಹಾಗೂ ಡೊನೇಶನ್ ಹೆಸರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಮಕ್ಕಳ ಪಠ್ಯಪುಸ್ತಕದಲ್ಲಿ ಮನುವಾದ ಬೇಡ: ಪ್ರತಿಭಟನೆ
ಈಗಾಗಲೇ ಕೋವಿಡ್‌ನಿಂದಾಗಿ ಪೋಷಕರು ತೀವ್ರ ತೊಂದರೆಯಲ್ಲಿದ್ದು ಇಂತಹ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ ವಸೂಲಾತಿ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದ ಸ್ಥಿತಿ ಪೋಷಕರಿಗೆ ಬಂದೊದಗಿದೆ.ಆದ್ದರಿಂದ ಕೂಡಲೇ ಈ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಸರಕಾರ ನಿಗದಿಪಡಿಸಿರುವ ಶುಲ್ಕದ ವಿವಿರವನ್ನು ಸೂಚನಾ ಫಲಕದಲ್ಲಿ ಹಾಕುವ ಮೂಲಕ ಹೆಚ್ಚಿನ ಶುಲ್ಕ ವಸೂಲಿಗೆ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ಕರವೇ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಭೀಮು ನಾಯಕ ಮಲ್ಲಿಬಾವಿ,ಹಣಮೆಗೌಡ,ಶ್ರೀನಿವಾಸ ನಾಯಕ,ಆನಂದ ಮಾಚಗುಂಡಾಳ,ಪ್ರಭು,ಕುಮಾರ ಮೋಪಗಾರ,ದೇವು,ಬಸವರಾಜ ಯಾಳಗಿ ಸೇರಿದಂತೆ ಅನೇಕರಿದ್ದರು.
ಇದನ್ನೂ ಓದಿ: ಭಾರತಿಯ ಯುವ ಸೈನ್ಯಕ್ಕೆ ಸೋನುಬಾಯಿ, ಗಣೇಶ ಮೇಳಕುಂದ ಆಯ್ಕೆ